ವಾಷಿಂಗ್ಟನ್:
ವಿಶ್ವ ಆರೋಗ್ಯ ಸಂಸ್ಥೆಗೆ ಅನುದಾನ ಸ್ಥಗಿತಗೊಳಿಸಲು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೈಗೊಂಡಿರುವ ನಿರ್ಧಾರ ಸರಿಯಲ್ಲ ಎಂದು ಮೈಕ್ರೋಸಾಫ್ಟ್ ಸಿಇಓ ಬಿಲ್ ಗೇಟ್ಸ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ. ಈ ಸಂಕಷ್ಟ ಸನ್ನಿವೇಶದಲ್ಲಿ ಇಂತಹ ತೀರ್ಮಾನ ಸಹನೀಯವಲ್ಲ ಎಂದು ಅವರು ಹೇಳಿದ್ದಾರೆ.
ಜಗತ್ತಿನೆಲ್ಲೆಡೆ ಕೊರೊನಾ ವೈರಾಣು ಸೋಂಕು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ ಶ್ರಮಿಸುತ್ತಿದೆ. ಜಗತ್ತಿಗೆ ಈ ಸಂಸ್ಥೆ ಹಿಂದೆಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ. ಜನವರಿ ಅಂತ್ಯದಲ್ಲಿ ಕೊರೊನಾ ವೈರಸ್ ಸಾರ್ವಜನಿಕ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದಾಗ ಬಿಲ್ ಗೇಟ್ಸ್ ಪ್ರತಿಷ್ಠಾನದ ಪರವಾಗಿ 100 ಮಿಲಿಯನ್ ಡಾಲರ್ ದೇಣಿಗೆಯನ್ನು ಬಿಲ್ ಗೇಟ್ಸ್ ಪ್ರಕಟಿಸಿದ್ದರು.
ಬಿಲ್ ಗೇಟ್ಸ್.. ಇಷ್ಟು ಭಾರಿ ಮೊತ್ತದ ದೇಣಿಗೆ ಪ್ರಕಟಿಸಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಚೀನಾದಲ್ಲಿ ಕ್ಷಯ ರೋಗ ನಿಯಂತ್ರಣಕ್ಕೆ 10 ಮಿಲಿಯನ್ ಡಾಲರ್ ದೇಣಿಗೆ ಪ್ರಕಟಿಸಿದ್ದರು. ಇನ್ನೂ ಅಮೆರಿಕಾದಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್ ಡೌನ್ ಜಾರಿಗೊಳಿಸಬೇಕೆಂದು ಬಿಲ್ ಗೇಟ್ಸ್ ಸೇರಿದಂತೆ ಹಲವು ತಜ್ಞರು ಸಲಹೆ ನೀಡಿದರೂ ಟ್ರಂಪ್ ಮಾತ್ರ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದಾಗಿ ಅಮೆರಿಕಾದಲ್ಲಿ ಕೊರೊನಾ ಕರಾಳ ನೃತ್ಯದ ಮೂಲಕ ಜನರನ್ನು ತಲ್ಲಣಗೊಳಿಸುತ್ತಿದೆ.
ಇನ್ನೂ ವಿಶ್ವ ಆರೋಗ್ಯ ಸಂಸ್ಥೆಗೆ ಅನುದಾನ ನಿಲ್ಲಿಸಲು ಟ್ರಂಪ್ ಕೈಗೊಂಡಿರುವ ನಿರ್ಣಯ ವಿರುದ್ದ ಅಮೆರಿಕಾ ಮಡಿಕಲ್ ಅಸೋಸಿಯೇಷನ್ ಪ್ರತಿಕ್ರಿಯಿಸಿ, ಇಡೀ ಜಗತ್ತು ಸಂಕಷ್ಟ ಎದುರಿಸುತ್ತಿರುವ ಸನ್ನಿವೇಶದಲ್ಲಿ ಟ್ರಂಪ್ ಕೈಗೊಂಡಿರುವ ನಿರ್ಣಯ ಅತ್ಯಂತ ಪ್ರಮಾದಕರ ಎಂದು ಅಭಿಪ್ರಾಯಪಟ್ಟಿದೆ. ಈ ಸಂಬಂಧ ಡಾ|| ಪ್ಯಾಟ್ರಿಕ್ ಹ್ಯಾರಿಸ್ ಹೇಳಿಕೆ ಬಿಡುಗಡೆಗೊಳಿಸಿ, ಟ್ರಂಪ್ ತಮ್ಮ ತೀರ್ಮಾನವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.