ಟೋಕಿಯೋ
ಹಗಿಬಿಸ್ ಚಂಡಮಾರುತದಿಂದ ಜಪಾನ್ ಚೇತರಿಸಿಕೊಳ್ಳೂವ ಮುನ್ನವೇ ಎರಡು ಹೊಸ ಚಂಡಮಾರುತಗಳು ಜಪಾನ್ ನತ್ತ ಬೀಸಲಿವೆ.ಹಗಿಬಿಸ್ ಚಂಡಮಾರುತದಿಂದಾದ ಮಳೆ ಇನ್ನೂ ತಗ್ಗುವ ಮೊದಲೇ ಪ್ರವಾಹ ಮತ್ತು ಭೂಕುಸಿತಗಳಿಂದಾದ ಹಾನಿಯನ್ನು ಸರಿಪಡಿಸುವ ಮುನ್ನವೇ ಇದೀಗ ಮತ್ತೆರಡು ಚಂಡಮಾರುತಗಳು ಜಪಾನ್‍ನಲ್ಲಿ ಅಪ್ಪಳಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಟೋಕಿಯೋದ ದಕ್ಷಿಣ ಮತ್ತು ನೈಋತ್ಯ ಕರಾವಳಿಯಲ್ಲಿ ಈ ವರ್ಷದ 20 ನೇ ಚಂಡಮಾರುತ ನಿಗೌರಿ ಬೀಸಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಗಂಟೆಗೆ 162 ಕಿಲೋಮೀಟರ್ ವೇಗದಲ್ಲಿ ಪ್ರಬಲ ಬಿರುಗಾಳಿ ಬೀಸಲಿದೆ. ಅಲ್ಲದೇ ಜಪಾನ್‍ನ ನಾಮಾಂಕಿತದ ಪ್ರಕಾರ 21 ನೇ ಚಂಡಮಾರುತ ಬ್ಯುಲೋಯ್ ಸಹ ಅಕ್ಟೋಬರ್ 26 ರ ರಾತ್ರಿ ಜಪಾನ್ ಪೂರ್ವ ಕರಾವಳಿಯನ್ನು ಅಪ್ಪಳಿಸಲಿದೆ.
ಕಳೆದ ವಾರ ಅಪ್ಪಳಿಸಿದ ಹಗಿಬಿಸ್ ಚಂಡಮಾರುತದಿಂದ ಉಂಟಾದ ಭಾರಿ ಮಳೆ ಮತ್ತು ಬೀಸಿದ ಬಿರುಗಾಳಿಯ ಪರಿಣಾಮ 140 ಕ್ಕೂ ಹೆಚ್ಚು ಭೂಕುಸಿತಗಳಾಗಿದ್ದು ಸುಮಾರು 79 ಸಾವಿರ ಮನೆಗಳು ನೀರಿನಲ್ಲಿ ಮುಳುಗಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ಹಗಿಬಿಸ್ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 78 ಕ್ಕೆ ಏರಿಕೆಯಾಗಿದ್ದು ಸುಮಾರು 400 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
