ಕೊಲಂಬೊ:
ಶ್ರೀಲಂಕಾ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಂದಾ ರಾಜಪಕ್ಸೆ ಅವರ ಆಡಳಿತಾ ರೂಢ ಎಸ್‌ಎಲ್‌ಪಿಪಿ (ಶ್ರೀಲಂಕಾ ಪೀಪಲ್ಸ್ ಪಾರ್ಟಿ) ಪಕ್ಷ ಅಭೂತಪೂರ್ವ ಜಯಸಾಧಿಸಿದ್ದು ಮತ್ತೆ ಅಧಿಕಾರಕ್ಕೇರುವುದು ಖಚಿತವಾಗಿದೆ.
ದ್ವೀಪ ರಾಷ್ಟ್ರದಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ತಡರಾತ್ರಿಯೂ ಮುಂದುವರಿಯಿತು. ಶ್ರೀಲಂಕಾ ಸಂಸತ್‌ನ ಸದಸ್ಯರ ಸಂಖ್ಯೆ 225 ಆಗಿದ್ದು ಈ ಪೈಕಿ ಪ್ರಕಟವಾದ ಫಲಿತಾಂಶಗಳ ಪೈಕಿ ರಾಜಪಕ್ಸೆಯವರ ಪಕ್ಷ ಭಾರಿ ಗೆಲುವಿನತ್ತ ಸಾಗಿದೆ. ಮೂಲಗಳ ಪ್ರಕಾರ ರಾಜಪಕ್ಸೆ ಅವರ ಎಸ್ ಎಲ್ ಪಿಪಿ ಪಕ್ಷ 145 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದು, ಎಸ್ ಎಲ್ ಪಿಪಿ ಸೇರಿದಂತೆ ರಾಜಪಕ್ಸೆ ಅವರ ಮೈತ್ರಿಕೂಟ ಒಟ್ಟು 150 ಸ್ಥಾನಗಳನ್ನು ಗೆದ್ದಿದೆ.
ಸಿಂಹಳ ಸಮುದಾಯದವರು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ರಾಜಪಕ್ಸೆ ಪಕ್ಷಕ್ಕೆ ಶೇ.60ರಷ್ಚು ಮತಗಳು ಚಲಾವಣೆಯಾಗಿದೆ ಎಂದು ಹೇಳಲಾಗಿದೆ. ಚಲಾವಣೆಯಾದ ಒಟ್ಟು 6.8 ಮಿಲಿಯನ್ ಮತಗಳ ಪೈಕಿ ರಾಜಪಕ್ಸೆ ಅವರ ಪಕ್ಷಕ್ಕೇ ಶೇ.59.9ರಷ್ಟು ಮತಗಳು ಚಲಾವಣೆಯಾಗಿದೆ ಎನ್ನಲಾಗಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ‘ಇದು ಆಡಳಿತಾರೂಢ ಪಕ್ಷಕ್ಕೆ ಲಭಿಸಿದ ಅದ್ಭುತ ಗೆಲುವು’ ಎಂದು ಟ್ವೀಟ್ ಮಾಡಿದ್ದಾರೆ. ಮಹಿಂದ ಅವರ ಪ್ರಬಲ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲಾಗಿರುವ ಸಜಿತ್ ಪ್ರೇಮದಾಸ ಅವರ ಪಕ್ಷ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್‌ಪಿ) ನಾಲ್ಕನೇ ಸ್ಥಾನ ಪಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ