ಬ್ಯೂನಸ್ ಏರ್ಸ್
ಹಾಲಿ ಸರ್ಕಾರದ ವಿರುದ್ಧ ಬಂಡೆದ್ದು ಅದನ್ನು ಉರುಳಿಸಲು ಪ್ರಯತ್ನಿಸುತ್ತಿರುವ ಪ್ರತಿಪಕ್ಷದ ಕಾರ್ಯ ಭಯೋತ್ಪಾದನೆಗೆ ಸಮಾನವಾಗಿದೆ ಎಂದು ವೆನಿಜುವೆಲಾ ರಕ್ಷಣಾ ಸಚಿವ ವ್ಲಾದಿಮಿರ್ ಲೋಪೆಜ್ ಹೇಳಿದ್ದಾರೆ.
ವೆನಿಜುವೆಲಾ ಪ್ರತಿಪಕ್ಷ ನಾಯಕ ಜುವಾನ್ ಗುವಾಯಿದೊ ಅವರು ಹಾಲಿ ರಾಷ್ಟ್ರಪತಿ ನಿಕೊಲಸ್ ಮಾದುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಾಗರಿಕರು ಹಾಗೂ ಸೈನಿಕರು ರಸ್ತೆಗಿಳಿಯಬೇಕು ಎಂದು ಕರೆ ನೀಡಿದ್ದು, ಇದು ಭಯೋತ್ಪಾದನಾ ಕೃತ್ಯವಾಗಿರುವುದಾಗಿ ಲೋಪೆಜ್ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಹಿಂಸೆಗೆ ಪ್ರತಿಪಕ್ಷದ ನಾಯಕರೇ ಜವಾಬ್ದಾರರು ಎಂದಿರುವ ಲೋಪೆಜ್ ಹಿಂಸೆಯನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಮಾದುರೊ ಅವರು ವೆನಿಜುವೆಲಾ ಅಧ್ಯಕ್ಷರಾಗಿ ಅಧಿಕಾರ ಸ್ವೀರಕರಿಸಿದ ನಂತರ ಜನವರಿ 21ರಂದು ದೊಡ್ಡ ಪ್ರಮಾಣದಲ್ಲಿ ವಿರೋಧ ಪ್ರದರ್ಶನ ನಡೆಸಲಾಯಿತು. ಇದಾದ ನಂತರ ಗುವಾಯಿದೊ, ದೇಶದ ಮಧ್ಯಂತರ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದಾರೆ. ಗುವಾಯಿದೊ ಅವರಿಗೆ ಅಮೆರಿಕ ಸಹಿತ ಇತರ ಪಶ್ಚಿಮ ರಾಷ್ಟ್ರಗಳ ಬೆಂಬಲವಿದೆ. ಆದರೆ, ರಷ್ಯಾ, ಚೀನಾ ಸೇರಿದಂತೆ ಇತರ ದೇಶಗಳು ಮಾದುರೊ ಅವರು ಕಾನೂನಾತ್ಮಕ ರಾಷ್ಟ್ರಪತಿಯಾಗಿದ್ದಾರೆ ಎಂದು ಬೆಂಬಲ ಸೂಚಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ