ವಾಷಿಂಗ್ಟನ್
ವಾಹನೋದ್ಯಮ(ಆಟೋಮೊಬೈಲ್) ಆಮದಿನಿಂದ ರಾಷ್ಟ್ರೀಯ ಭದ್ರತೆಗೆ ಎದುರಾಗಬಹುದಾದ ಅಪಾಯವನ್ನು ಬಗೆಹರಿಸುವ ನಿಟ್ಟಿನಲ್ಲಿ ಯುರೋಪ್ ಒಕ್ಕೂಟ ಮತ್ತು ಜಪಾನ್‍ನೊಂದಿಗೆ ಹೊಸದಾಗಿ ಮಾತುಕತೆಗಳನ್ನು ನಡೆಸಲು ಅಮೆರಿಕ ಆಡಳಿತಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 180 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.
‘ಯೂರೋಪ್ ಒಕ್ಕೂಟ, ಜಪಾನ್ ಸೇರಿದಂತೆ ಯಾವುದೇ ದೇಶದಿಂದ ಆಮದಾಗುವ ವಾಹನಗಳು ಹಾಗೂ ವಾಹನ ಬಿಡಿಭಾಗಳಿಂದ ರಾಷ್ಟ್ರೀಯ ಭದ್ರತೆಗೆ ಎದುರಾಬಹುದಾದ ಯಾವುದೇ ಅಪಾಯವನ್ನು ಬಗೆಹರಿಸಲು ಸಂಧಾನ ಮಾತುಕತೆಗಳನ್ನು ನಡೆಸುವಂತೆ ಅಮೆರಿಕ ವಾಣಿಜ್ಯ ಪ್ರತಿನಿಧಿಗೆ ಸೂಚಿಸಲು ನಿರ್ಧರಿಸಿದ್ದೇನೆ. ಈ ಮಾತುಕತೆಗಳು ಮುಂದಿನ 180 ದಿನಗಳಲ್ಲಿ ಪೂರ್ಣಗೊಳ್ಳುವಂತೆ ಆಡಳಿತ ಕಾರ್ಯಮಗ್ನವಾಗಬೇಕು’ ಎಂದು ಟ್ರಂಪ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ತೀರ್ಮಾನದಿಂದ ಆಟೋಮೊಬೈಲ್ ಮೇಲೆ ಹೊಸದಾಗಿ ಮುಂದಿನ ಆರು ತಿಂಗಳು ಆಮದು ಸುಂಕ ಹೆಚ್ಚಳ ಮಾಡುವುದು ವಿಳಂಬವಾಗಲಿದೆ. ಆಮದು ಸುಂಕ ಹೆಚ್ಚಳವನ್ನು ಈ ಹಿಂದೆ ಅಮೆರಿಕ ವಾಣಿಜ್ಯ ಇಲಾಖೆ ಸಮರ್ಥಿಸಿಕೊಂಡಿತ್ತು.
ವಾಹನಗಳು ಮತ್ತು ಕೆಲವು ವಾಹನ ಬಿಡಿ ಭಾಗಗಳ ಆಮದಿನಿಂದ ದೇಶದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಲಿದೆ ಎಂದು ಎಂದು ವಾಣಿಜ್ಯ ಇಲಾಖೆ ಕಳೆದ ಫೆಬ್ರವರಿಯಲ್ಲಿ ನಿರ್ಣಯಿಸಿತ್ತು. ಅಮೆರಿಕದ ರಕ್ಷಣೆ ಮತ್ತು ಸೇನೆಯಲ್ಲಿನ ಉತ್ಕೃಷ್ಟತೆಯು ವಾಹನೋದ್ಯಮ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ಸ್ಪರ್ಧಾತ್ಮಕತೆ ಆಧರಿಸಿದೆ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.