ಲಂಡನ್:
ಜಗತ್ತಿನಲ್ಲಿರುವ ಸರ್ಕಾರಗಳ ಒಳಗಿನ ಗೌಪ್ಯ ಮಾಹಿತಿಗಳನ್ನು ಬಹಿರಂಗಪಡಿಸುವ ಮೂಲಕ ವಿಶ್ವಾದ್ಯಂತ ಸುದ್ದಿಯಾಗಿದ್ದ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ನ್ನು 7 ವರ್ಷಗಳ ಬಳಿಕ ಬಂಧಿಸಲಾಗಿದೆ.
ಲಂಡನ್ ನಿನ ಈಕ್ವೆಡೇರಿಯನ್ ದೂತಾವಾಸ ಕಚೇರಿಯಿಂದ ಬ್ರಿಟನ್ ಪೊಲೀಸರು ಜೂಲಿಯನ್ ಅಸಾಂಜ್ ನ್ನು ಬಂಧಿಸಿದ್ದಾರೆ. ಸ್ವೀಡನ್ ದೇಶಕ್ಕೆ ಗಡಿಪಾರಾಗುವುದನ್ನು ತಪ್ಪಿಸಿಕೊಳ್ಳಲು ಜೂಲಿಯನ್ ಅಸಾಂಜ್ 2012 ರಿಂದ ಇದೇ ಕಚೇರಿಯಲ್ಲಿ ರಕ್ಷಣೆ ಪಡೆದಿದ್ದರು ಎಂದು ತಿಳಿದು ಬಂದಿದೆ.
ಅವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆಗಾಗಿ ಅವರನ್ನು ಸ್ವೀಡನ್ ಗೆ ಗಡಿಪಾರು ಮಾಡುವಂತೆ ಆಗ್ರಹಿಸಲಾಗಿತ್ತು.
ಈಕ್ವೆಡಾರ್ ನ ಸರ್ಕಾರ ಅಸಾಂಜ್ ಗೆ ನೀಡಿದ್ದ ಆಶ್ರಯವನ್ನು ಹಿಂಪಡೆದ ಬೆನ್ನಲ್ಲೆ ಬ್ರಿಟನ್ ಪೊಲೀಸರು ಅಸಾಂಜ್ ನ್ನು ವಶಕ್ಕೆ ಪಡೆದಿದ್ದಾರೆ. ವಿಕಿಲೀಕ್ಸ್ ನ ಟ್ವಿಟರ್ ಖಾತೆ ಸಹ ಅಸಾಂಜ್ ಬಂಧನವನ್ನು ಸ್ಪಷ್ಟಪಡಿಸಿದೆ.
ವಿಶ್ವದ ದೊಡ್ಡಣ್ಣ ಅಮೆರಿಕ ಕುರಿತಾಗಿಯೂ ಅನೇಕ ಸ್ಫೋಟಕ ಮಾಹಿತಿಗಳನ್ನು ವಿಕಿಲೀಕ್ಸ್ ಮೂಲಕ ಬಹಿರಂಗಪಡಿಸಿದ್ದ ಅಸಾಂಜ್ ಅಮೆರಿಕದಿಂದಲೂ ಬಂಧನ ಭೀತಿ ಎದುರಿಸುತ್ತಿದ್ದಾರೆ. ಅಸಾಂಜ್ ಅವರ ಸಾಹಸಕ್ಕಾಗಿ 2011 ರಲ್ಲಿ ಶಾಂತಿ ಪ್ರತಿಷ್ಠಾನದ ಪ್ರತಿಷ್ಠಿತ ಪದಕ ಪಡೆದಿದ್ದರು.