ಬಾಗ್ದಾದ್
ಇರಾಕ್ ಹಾಗೂ ಚೀನಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳು ಅತ್ಯುತ್ತಮವಾಗಿವೆ ಎಂದು ಇರಾಕ್ ನ ವಿದೇಶಾಂಗ ಸಚಿವ ಮೊಹಮ್ಮದ್ ಅಲ್ ಹಕೀಮ್ ಹೇಳಿದ್ದಾರೆ.
ಭಾನುವಾರ ಚೀನಾದ ಇರಾಕ್ ರಾಯಭಾರಿ ಜ್ಯಾಂಗ್ ತಾವೋ ಅವರನ್ನು ಭೇಟಿಯಾದ ಹಕೀಮ್, ಇರಾಕ್ ಮತ್ತು ಚೀನಾ ನಡುವಿನ ಸ್ಥಿರ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಸಂಬಂದಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅಲ್ಲಿನ ಚೀನಾ ರಾಯಭಾರಿ ಕಚೇರಿ ಬಿಡುಗಡೆಗೊಳಿಸಿರುವ ಹೇಳಿಕೆ ತಿಳಿಸಿದೆ.
ಅಲ್ ಹಕೀಮ್ ಅವರು ಬಾಗ್ದಾದ್ ಮತ್ತು ಬೀಜಿಂಗ್ ನಡುವಿನ ದ್ವಿಪಕ್ಷೀಯ ಸಂಬಂಧದ ವ್ಯಾಪ್ತಿಯನ್ನು ಹೆಚ್ಚಿಸಿ ತಂತ್ರಗಾರಿಕೆಯ ಪಾಲುದಾರಿಕೆ, ಸಹಕಾರ ಹೆಚ್ಚಳ ಮತ್ತು ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ವೇದಿಕೆಗಳಲ್ಲಿ ಪರಿಣಾಮಕಾರಿ ಮಾತುಕತೆಗೆ ಎಡೆ ಮಾಡಿಕೊಡಬೇಕು. ಇದು ಎರಡೂ ಮಿತ್ರದೇಶಗಳ ಹಿತಾಸಕ್ತಿಗಳನ್ನು ಪೂರೈಸಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಿಕೆ ತಿಳಿಸಿದೆ.
ಕಳೆದ ಮೇ ತಿಂಗಳಲ್ಲಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಜ್ಯಾಂಗ್, ಚೀನಾ ಹಾಗೂ ಇರಾಕ್ ನಡುವೆ ವ್ಯಾಪಾರ ವಿನಿಮಯ ಪ್ರಮಾಣ 2018ರಲ್ಲಿ 30 ಬಿಲಿಯನ್ ಅಮೆರಿಕನ್ ಡಾಲರ್ ಗೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಇನ್ನಷ್ಟು ವೃದ್ಧಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.
ಚೀನಾ ಇರಾಕ್ ನ ಬಹುದೊಡ್ಡ ವ್ಯಾಪಾರಿ ಪಾಲುದಾರ ದೇಶವಾಗಿದೆ. ಇನ್ನೊಂದೆಡೆ ಇರಾಕ್, ಚೀನಾಗೆ ಎರಡನೇ ಅತಿ ದೊಡ್ಡ ತೈಲ ಪೂರೈಸುವ ಹಾಗೂ ಮಧ್ಯಪೂರ್ವದಲ್ಲಿ ನಾಲ್ಕನೇ ಅತಿ ದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ