ಬೀಜಿಂಗ್:
ಪಾಕಿಸ್ತಾನದ ಪರಮಾಪ್ತ ಮಿತ್ರ ಎಂದೇ ಖ್ಯಾತವಾಗಿರುವ ಚೀನಾದ ಅಧ್ಯಕ್ಷರು ಇದೇ 11 ಮತ್ತು 12ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ತಳಿದು ಬಂದಿದೆ ಮತ್ತು ಭೇಟಿಯ ವೇಳೆಯಲ್ಲಿ ಅವರು ಭಾರತದ ಪ್ರಧಾನಿಯವರ ಜೊತೆಯಲ್ಲಿ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಎರಡೂ ದೇಶದ ದ್ವಿಪಕ್ಷೀಯ ಸಂಬಂಧ ಮತ್ತು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ವಿಸ್ತೃತ ಚರ್ಚೆ ನಡೆಸಲಿದ್ದಾರೆ ಎಂದು ಚೀನಾ ತಿಳಿಸಿದೆ.
ಇನ್ನೂ ಈ ಬಾರಿಯ ಶೃಂಗಸಭೆಯೂ ಹಿತಿಹಾಸ ಪ್ರಸಿದ್ಧ ಮಹಾಬಲಿಪುರಂ ನಲ್ಲಿ ನಡೆಯಲಿದ್ದು, ಅಲ್ಲಿಂದ 13ರಂದು ಕ್ಸಿ ಜಿಂಗ್ ಪಿಂಗ್ ಅವರು ನೇಪಾಳಕ್ಕೆ ತೆರಳಲಿದ್ದಾರೆ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಹುವಾ ಚುನೈಂಗ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಮಧ್ಯೆ ನಡೆಯುತ್ತಿರುವ ಎರಡನೇ ಅನೌಪಚಾರಿಕ ಸಭೆ ಇದಾಗಿದೆ. ಮೊದಲನೇ ಸಭೆ ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ನಡೆದಿತ್ತು. 2017ರಲ್ಲಿ ದೋಕ್ಲಮ್ ನಲ್ಲಿ ಭಾರತೀಯ ಮತ್ತು ಚೀನಾ ಮಿಲಿಟರಿ ನಿಯೋಜನೆಗೊಂಡ 73ದಿನದ ನಂತರ ಎರಡೂ ದೇಶಗಳ ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ಈ ಸಭೆ ನಡೆದಿತ್ತು.
ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ಸಿಲುಗುರಿ ಕಾರಿಡಾರ್ ಹತ್ತಿರ ರಸ್ತೆ ನಿರ್ಮಿಸುವ ಯೋಜನೆಗೆ ಚೀನಾ ಮಿಲಿಟರಿ ಕೈಹಾಕಿತ್ತು. ಈ ಯೋಜನೆಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ನಿಟ್ಟಿನಲ್ಲಿ ಅಹಿತಕರ ಘಟನೆ ನಡೆಯದಂತೆ ಎರಡೂ ಕಡೆಗಳಿಂದ ತಮ್ಮ ತಮ್ಮ ಮಿಲಿಟರಿಗಳನ್ನು ಇಲ್ಲಿ 73 ದಿನಗಳ ಕಾಲ ನಿಯೋಜಿಸಲಾಗಿತ್ತು. ನಂತರ ಚೀನಾ ರಸ್ತೆ ನಿರ್ಮಾಣ ಮಾಡುವ ಯೋಜನೆ ಕೈಬಿಟ್ಟ ನಂತರ ಸೇನೆಯನ್ನು ಎರಡೂ ದೇಶಗಳು ಹಿಂದಕ್ಕೆ ಕರೆಸಿಕೊಂಡವು.
ಇತ್ತ ಕ್ಸಿ ಜಿನ್ ಪಿಂಗ್ ಅವರು ಭಾರತಕ್ಕೆ ಬರುವ ಮೊದಲೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಚೀನಾಕ್ಕೆ ತೆರಳಿದ್ದು ನಿನ್ನೆ ಪ್ರಧಾನಿ ಲಿ ಕೆಖಿಯಾಂಗ್ ಅವರನ್ನು ಭೇಟಿ ಮಾಡಿ ಸುಧೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ