ಬಿರ್ಭುಮ್:
ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯಲ್ಲಿ ಹೋಳಿ ಆಚರಣೆ ವೇಳೆ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಇಪ್ಪತ್ತೊಂದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಶುಕ್ರವಾರ ಸಂಜೆ ಸೈಂಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘರ್ಷಣೆ ನಡೆದಿದ್ದು, ಮತ್ತಷ್ಟು ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ರಾಜ್ಯ ಸರ್ಕಾರ, ಸೈಂಥಿಯಾ ಪಟ್ಟಣ ಮತ್ತು ಪಕ್ಕದ ಐದು ಪಂಚಾಯತ್ ಪ್ರದೇಶಗಳಲ್ಲಿ ಮಾರ್ಚ್ 17 ರವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಸದ್ಯ ಪರಿಸ್ಥಿತಿ ಶಾಂತಿಯುತವಾಗಿದೆ. ಹಿಂಸಾಚಾರದಲ್ಲಿ ಎರಡೂ ಗುಂಪುಗಳ ಕೆಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ ಎಂದು ಅವರು ಹೇಳಿದರು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಪ್ರದೇಶದಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಇನ್ನು ಹೋಳಿ ಘರ್ಷಣೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರ ಸತ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ
ಬಿರ್ಭುಮ್ ಜಿಲ್ಲೆಯ ಕಿರ್ನಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಅನೈಪುರ ಗ್ರಾಮದಲ್ಲಿ ಹೋಳಿ ಆಚರಿಸುತ್ತಿದ್ದ ಹಿಂದೂಗಳ ಮೇಲೆ ಸ್ಥಳೀಯ ತೃಣಮೂಲ ಕಾಂಗ್ರೆಸ್(ಟಿಎಂಸಿ) ಪಂಚಾಯತ್ ಸದಸ್ಯರ ನೇತೃತ್ವದ ಗುಂಪೊಂದು ದಾಳಿ ಮಾಡಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.
ಹಿಂದೂಗಳು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿದ ನಂತರ ಹಿಂಸಾಚಾರ ಭುಗಿಲೆದ್ದಿತು. ದಾಳಿಕೋರರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಲು “ನಿಮಗೆ ಎಷ್ಟು ಧೈರ್ಯ?” ಎಂದು ಪ್ರಶ್ನಿಸಿರುವುದಾಗಿ ಮಾಳವೀಯ ಅವರ ಹೇಳಿದ್ದಾರೆ.ಸ್ಥಳದಲ್ಲಿ ಪೊಲೀಸರು ಇದ್ದರೂ ಅವರು ಮಧ್ಯಪ್ರವೇಶಿಸಲಿಲ್ಲ. ಬದಲಿಗೆ ದಾಳಿಕೋರರನ್ನು ರಕ್ಷಿಸಿದರು ಎಂದು ಮಾಳವೀಯ ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ “ಮತ ಬ್ಯಾಂಕ್ ರಾಜಕೀಯ”ದಲ್ಲಿ ತೊಡಗಿದೆ. ಪಶ್ಚಿಮ ಬಂಗಾಳವು ಬಾಂಗ್ಲಾದೇಶದಂತಾಗಿದೆ ಎಂದು ಮಾಳವೀಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
