ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಾರ್ಚ್ 26ರಂದು ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ರವೀಂದ್ರ ಜಡೇಜಾ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಶ್ರೇಯಸ್ ಐಯ್ಯರ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸಲಿವೆ.
ಇನ್ನು ಟೂರ್ನಿ ಸಮೀಪಿಸುತ್ತಿದ್ದಂತೆ ಎಲ್ಲಾ ತಂಡಗಳ ಆಟಗಾರರು ಮೈದಾನಕ್ಕಿಳಿದು ಅಭ್ಯಾಸಗಳನ್ನು ಆರಂಭಿಸಿ ಸಿದ್ಧತೆಗಳನ್ನು ನಡೆಸಿವೆ. ನೆಟ್ ಅಭ್ಯಾಸದ ಜೊತೆಗೆ ತಮ್ಮ ತಂಡಗಳ ಆಟಗಾರರನ್ನೇ ಎರಡು ತಂಡಗಳನ್ನಾಗಿ ವಿಭಜಿಸಿರುವ ಕೆಲ ತಂಡಗಳು ಅಭ್ಯಾಸ ಪಂದ್ಯಗಳನ್ನೂ ಕೂಡ ನಡೆಸಿವೆ.
ಸಂಕಟ ತಂದ ಕೀಟಲೆ; ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದವೇ ಸಿಡಿದೆದ್ದ ನಾಯಕ ಸಂಜು ಸ್ಯಾಮ್ಸನ್
ಮೊದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡೆಸಿದ್ದ ಈ ರೀತಿಯ ಅಭ್ಯಾಸ ಪಂದ್ಯದಲ್ಲಿ ತಂಡದ ಆಟಗಾರರಾದ ಫಾಫ್ ಡು ಪ್ಲೆಸಿಸ್ ಮತ್ತು ಅನುಜ್ ರಾವತ್ ಅಬ್ಬರಿಸಿದ್ದರು. ಅದೇ ರೀತಿ ಇಂದು ( ಮಾರ್ಚ್ 25 ) ರಾಜಸ್ಥಾನ್ ರಾಯಲ್ಸ್ ತಂಡ ಕೂಡ ಅಭ್ಯಾಸ ಪಂದ್ಯವನ್ನು ನಡೆಸಿದ್ದು, ಈ ಪಂದ್ಯದಲ್ಲಿ ತಂಡದ ಆಟಗಾರರಾದ ಶಿಮ್ರಾನ್ ಹೆಟ್ಮೆಯರ್ ಹಾಗೂ ದೇವದತ್ ಪಡಿಕ್ಕಲ್ ಅಬ್ಬರಿಸಿದ್ದು, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮುನ್ಸೂಚನೆಯನ್ನು ನೀಡಿದ್ದಾರೆ. ಈ ಪಂದ್ಯದ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.
ಟೀಮ್ ಪಿಂಕ್ vs ಟೀಮ್ ಬ್ಲ್ಯೂ ಪಂದ್ಯದಲ್ಲಿ ಸೋತ ಟೀಮ್ ಬ್ಲ್ಯೂ
ರಾಜಸ್ಥಾನ್ ರಾಯಲ್ಸ್ ತಂಡವನ್ನು ಎರಡು ತಂಡಗಳಾಗಿ ವಿಂಗಡಿಸಿ ಒಂದು ತಂಡಕ್ಕೆ ಟೀಮ್ ಪಿಂಕ್ ಹಾಗೂ ಮತ್ತೊಂದು ತಂಡಕ್ಕೆ ಟೀಮ್ ಬ್ಲ್ಯೂ ಎಂದು ಹೆಸರನ್ನು ಇಟ್ಟು ಅಭ್ಯಾಸವನ್ನು ನಡೆಸಲಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಬ್ಲ್ಯೂ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿ ಟೀಮ್ ಬ್ಲ್ಯೂ ತಂಡಕ್ಕೆ ಗೆಲ್ಲಲು 185 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಬ್ಲ್ಯೂ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ದು, ಟೀಮ್ ಪಿಂಕ್ 15 ರನ್‌ಗಳ ಗೆಲುವನ್ನು ಸಾಧಿಸಿದೆ.https://prajapragathi.com/question-about-puneet-in-school-exam-sakhat-is-viral-photo-of-the-question-paper/
ಟೀಮ್ ಪಿಂಕ್ ಪರ ಅಬ್ಬರಿಸಿದ ಪಡಿಕ್ಕಲ್, ಪರಾಗ್
ಇನ್ನು ಕಳೆದೆರಡು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ದೇವದತ್ ಪಡಿಕ್ಕಲ್ ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿದ್ದು, ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಪಿಂಕ್ ಪರ ಆಡಿ 51 ಎಸೆತಗಳಲ್ಲಿ 67 ರನ್ ಬಾರಿಸಿ ಟೀಮ್ ಪಿಂಕ್ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನುಳಿದಂತೆ ಟೀಮ್ ಪಿಂಕ್ ಪರ ರಿಯಾನ್ ಪರಾಗ್ 27 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದ್ದಾರೆ. ಹಾಗೂ ಟೀಮ್ ಪಿಂಕ್ ಪರ ಯುಜ್ವೇಂದ್ರ ಚಾಹಲ್ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದಿದ್ದಾರೆ.
ಟೀಮ್ ಬ್ಲ್ಯೂ ಪರ ಹೆಟ್ಮೆಯರ್ ಅಬ್ಬರ
ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಬ್ಲ್ಯೂ ಸೋಲನ್ನು ಅನುಭವಿಸಿದ್ದರೂ ಸಹ ಶಿಮ್ರಾನ್ ಹೆಟ್ಮೆಯರ್ 37 ಎಸೆತಗಳಿಗೆ ಅಜೇಯ 70 ರನ್ ಬಾರಿಸಿ ಅಬ್ಬರಿಸಿದ್ದಾರೆ. ಇನ್ನು ಟೀಮ್ ಬ್ಲ್ಯೂ ಪರ ಕಣಕ್ಕಿಳಿದಿದ್ದ ಕರುಣ್ ನಾಯರ್ 19 ಎಸೆತಗಳಲ್ಲಿ 31 ರನ್ ಬಾರಿಸಿದರು ಹಾಗೂ ತಂಡದ ಪರ ಬೌಲಿಂಗ್ ಮಾಡಿದ ಕುಲ್‌ದೀಪ್ ಸೇನ್ 3 ಓವರ್ ಬೌಲಿಂಗ್ ಮಾಡಿ 15 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ