ದುಬೈ:
ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್, ಭಾರತೀಯ ಮೂಲದ ಅಮೇರಿಕ ವೇಗಿ ಸೌರಭ್ ನೇತ್ರವಲ್ಕರ್ ಮತ್ತು ಮುಂಬೈ-ವಿಕೆಟ್ ಕೀಪರ್-ಬ್ಯಾಟರ್ ಹಾರ್ದಿಕ್ ತಮೋರ್ ಅವರನ್ನು ಆಟಗಾರರ ಅಂತಿಮ ಹರಾಜು(IPL 2025 Mega Auction) ಪಟ್ಟಿಗೆ ಸೇರಿಸಲಾಗಿದ್ದು, ಹರಾಜಿನ ಕಣದಲ್ಲಿರುವ ಆಟಗಾರರ ಸಂಖ್ಯೆ 577ಕ್ಕೇರಿದೆ.
ಈ ಬಾರಿ ಎರಡು ಸೆಟ್‌ಗಳಲ್ಲಿ ಮಾರ್ಕ್ಯೂ ಆಟಗಾರರ ಹೆಸರು ಹರಾಜಿಗೆ ಬರಲಿದೆ. ಭಾನುವಾರ ನಡೆಯುವ ಹರಾಜಿನ ಮೊದಲ ಮಾರ್ಕ್ಯೂ ಸೆಟ್‌ನಲ್ಲಿ ರಿಷಭ್ ಪಂತ್, ಇಂಗ್ಲೆಂಡ್‌ನ ಜಾಸ್ ಬಟ್ಲರ್, ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಶ್ರೇಯಸ್ ಅಯ್ಯರ್ ಮತ್ತು ಎಡಗೈ ವೇಗಿ ಅರ್ಷದೀಪ್ ಸಿಂಗ್ ಕಾಣಿಸಿಕೊಂಡಿದ್ದಾರೆ.
ಸೋಮವಾರ ನಡೆಯುವ ದ್ವಿತೀಯ ದಿನದ ಹರಾಜಿನ ಮಾರ್ಕ್ಯೂ ಸೆಟ್‌ನಲ್ಲಿರುವ ಆಟಗಾರರೆಂದರೆ, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್, ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಹಲ್ ಕಾಣಿಸಿಕೊಂಡಿದ್ದಾರೆ.
ಸೌದಿ ಅರೇಬಿಯದ ಜೆಡ್ಡಾದಲ್ಲಿ ಹರಾಜು ಪ್ರಕ್ರಿಯೆ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ 3.30ಕ್ಕೆ ಶುರುವಾಗಲಿದೆ. ಒಟ್ಟು 577 ಮಂದಿ ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಪೈಕಿ 367 ಮಂದಿ ಭಾರತೀಯರಾದರೆ, 210 ಕ್ರಿಕೆಟಿಗರು ವಿದೇಶೀಯರು. 81 ಆಟಗಾರರು 2 ಕೋಟಿ ರೂ., 27 ಕ್ರಿಕೆಟಿಗರು 1.5 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಪಂಜಾಬ್ ತಂಡದ ಬಳಿ ಗರಿಷ್ಠ 110.5 ಕೋಟಿ ರೂ. ಮೊತ್ತವಿದ್ದು ಬಲಿಷ್ಠ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಸಾಧ್ಯತೆ ಇದೆ.
ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಪಾಲ್ಗೊಳ್ಳಲಿದ್ದಾರೆ. ಇವರೆಂದರೆ, ಕೆ.ಎಲ್.ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ಪ್ರಸಿದ್ಧ್ ಕೃಷ್ಣ, ಲುವ್ನಿತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್.ಚೇತನ್, ಮನೋಜ್ ಭಾಂಡಗೆ, ಅಭಿಲಾಶ್ ಶೆಟ್ಟಿ, ವೈಶಾಖ್ ವಿಜಯ್‌ಕುಮಾರ್, ಪ್ರವೀಣ್ ದುಬೆ, ಮನ್ವಂತ್ ಕುಮಾರ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮಹೋಹರ್, ಬಿ.ಆರ್.ಶರತ್. ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್.
