ಮುಂಬೈ:
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳ ಅದ್ಭುತ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತು.2007ರ ನಂತರ ಟಿ20 ವಿಶ್ವಕಪ್, 2011ರ ನಂತರ ವಿಶ್ವಕಪ್ ಟ್ರೋಫಿ ಮತ್ತು 2013ರ ನಂತರ ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ದಶಕದ ಐಸಿಸಿ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡಿತು.
ಇದೇ ವೇಳೆ ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳು ಮುಂಬರುವ ಐಪಿಎಲ್ ಮೆಗಾ ಹರಾಜಿನ ಮೇಲೆ ಗಮನಹರಿಸಿದ್ದಾರೆ. ಹೌದು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್ ಅವರು ಐಪಿಎಲ್ 2025ರ ಮೊದಲು ಮೆಗಾ ಹರಾಜು ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. ಐಪಿಎಲ್ 2025ರ ಆವೃತ್ತಿಗಾಗಿ ಮೆಗಾ ಹರಾಜು ದಿನಾಂಕ ಯಾವುದು ಮತ್ತು ಎಲ್ಲಿ ನಡೆಯಬಹುದು? ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕಾದದ್ದು ಮಾಹಿತಿ ಇಲ್ಲಿದೆ.
ಮುಂದಿನ ಐಪಿಎಲ್ ಮೆಗಾ ಹರಾಜು 2022ರಂತೆ ಎರಡು ದಿನಗಳ ಪ್ರಕ್ರಿಯೆಯಾಗುವ ಸಾಧ್ಯತೆಯಿದೆ. 2022ರ ಫೆಬ್ರವರಿಯಲ್ಲಿ ಮೆಗಾ ಹರಾಜು ನಡೆಸಲಾಗಿತ್ತು. ಆ ನಂತರ 2023 ಮತ್ತು 2024ರ ಆವೃತ್ತಿಗಾಗಿ ಮಿನಿ ಹರಾಜುಗಳನ್ನು ಆಯಾ ವರ್ಷಗಳ ಡಿಸೆಂಬರ್‌ನಲ್ಲಿ ನಡೆಸಲಾಯಿತು.
ಇದೀಗ 2025ರ ಐಪಿಎಲ್‌ಗಾಗಿ ಮೆಗಾ ಹರಾಜು ದಿನಾಂಕವು ಬಹುಶಃ 2024ರ ಡಿಸೆಂಬರ್ ಮತ್ತು 2025ರ ಫೆಬ್ರವರಿ ನಡುವೆ ಅದೇ ಸಮಯದಲ್ಲಿ ನಡೆಯಬಹುದು. 2022ರಲ್ಲಿ ನಡೆದ ಕೊನೆಯ ಐಪಿಎಲ್ ಮೆಗಾ ಪ್ರಕ್ರಿಯೆಯು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದ್ದರೆ, 2023 ಮತ್ತು 2024ರ ಐಪಿಎಲ್ ಆವೃತ್ತಿಗಳು ಕ್ರಮವಾಗಿ ಕೊಚ್ಚಿ ಮತ್ತು ಯುಎಇನಲ್ಲಿ ನಡೆದವು. 2025ರ ಐಪಿಎಲ್ ಮೆಗಾ ಹರಾಜು ನಡೆಯುವ ಸ್ಥಳವನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ.
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪ್ರಕಾರ, ಐಪಿಎಲ್ 2022ರಂತೆ ಮೆಗಾ ಹರಾಜಿನಲ್ಲಿ ಪ್ರತಿ ತಂಡವು ಕೇವಲ 3ರಿಂದ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿರುತ್ತದೆ. ಆಗ ಒಟ್ಟು 204 ಆಟಗಾರರನ್ನು 551 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ