ಐಪಿಎಲ್‌ ಆಡುವ ಬಗ್ಗೆ ಧೋನಿ ಮಹತ್ವದ ಹೇಳಿಕೆ

ಮುಂಬಯಿ:

    ಅಕ್ಟೋಬರ್‌ 31ಕ್ಕೆ ಎಲ್ಲಾ ಫ್ರಾಂಚೈಸಿಗಳು ತಮ್ಮ ರಿಟೆನ್ಶನ್‌ ಪಟ್ಟಿಯನ್ನು ಪ್ರಕಟ ಮಾಡಬೇಕಾಗಿದೆ. ಈ ಮಧ್ಯೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರು ಈ ಬಾರಿ ಮತ್ತೆ ಐಪಿಎಲ್‌ ಆಡಲಿದ್ದಾರಾ? ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಧೋನಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

   ವೃತ್ತಿಪರ ಮಟ್ಟದಲ್ಲಿ ಕ್ರಿಕೆಟ್ ಆಡುವುದರಿಂದ ಎದುರಾಗುವ ಸವಾಲುಗಳ ಬಗ್ಗೆ ಧೋನಿ ಮಾತನಾಡಿದ್ದು, ವರ್ಷವಿಡೀ ಯಾವುದೇ ಕ್ರಿಕೆಟ್‌ ಆಡದಿದ್ದರೂ ಐಪಿಎಲ್‌ನಲ್ಲಿ ಆಡಲು ಹೇಗೆ ಫಿಟ್‌ ಆಗಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಈ ಬಾರಿಯ ಐಪಿಎಲ್‌ನಲ್ಲಿ ಮುಂದುವರಿಯುವ ಸೂಚನೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

  ಧೋನಿ ಸಂದರ್ಶನವೊಂದರಲ್ಲಿ ಮಾತನಾಡಿ “ನಮ್ಮ ಬಾಲ್ಯದಲ್ಲಿ, ನಾವು ಸಂಜೆ 4 ಗಂಟೆ ತನಕ ಊಟ, ತಿಂಡಿ ಇಲ್ಲದೆ ಆಟವಾಡುತ್ತಿದ್ದೆವು. ಮತ್ತು ಆಟವನ್ನು ಆನಂದಿಸುತ್ತಿದ್ದೆವು. ಆದರೆ ವೃತ್ತಿಪರ ಕ್ರೀಡೆಯನ್ನು ಆಡಿದಾಗ, ಬಾಲ್ಯದ ಆಟದಂತೆ ಇದನ್ನು ಆನಂದಿಸಲು ಕಷ್ಟವಾಗುತ್ತದೆ. ಅದನ್ನೇ ನಾನು ಮಾಡಲು ಬಯಸುತ್ತೇನೆ. ಇದು ಸುಲಭವಲ್ಲ. ಭಾವನೆಗಳು ಬರುತ್ತಲೇ ಇರುತ್ತವೆ, ಬದ್ಧತೆಗಳು ಇರುತ್ತವೆ. ಮುಂದಿನ ಕೆಲವು ವರ್ಷಗಳ ಕಾಲ ನಾನು ಆಟವನ್ನು ಆನಂದಿಸಲು ಬಯಸುತ್ತೇನೆ” ಎಂದು ಧೋನಿ ಹೇಳಿದ್ದಾರೆ. 

  “ನಾನು ಕಳೆದ 5 ವರ್ಷಗಳಿಂದ ಕ್ರಿಕೆಟ್ ಅನ್ನು ಆನಂದಿಸುತ್ತಿದ್ದೇನೆ. ನಾನು ಒಂಬತ್ತು ತಿಂಗಳ ಕಾಲ ನನ್ನನ್ನು ಫಿಟ್ ಆಗಿಡಲು ಸಾಧ್ಯವಾದರೆ ನಾನು ಎರಡೂವರೆ ತಿಂಗಳು ಐಪಿಎಲ್ ಆಡಬಹುದು. ನಾನು ಅದನ್ನು ತುಂಬಾ ಸರಳವಾಗಿ ಇಟ್ಟುಕೊಂಡಿದ್ದೇನೆ. ನಾನು 15, 20, 25 ದಿನಗಳವರೆಗೆ ತರಬೇತಿ ನಡೆಸುತ್ತೇನೆ, ನಂತರ 15-20 ದಿನಗಳವರೆಗೆ ವಿಶ್ರಾಂತಿ ಬಯಸುತ್ತೇನೆ, ಆದ್ದರಿಂದ ಇದು ನನಗೆ ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಾಧ್ಯ” ಎಂದು ಧೋನಿ ಹೇಳಿದ್ದಾರೆ.

  ಈ ಬಾರಿ ಐಪಿಎಲ್‌ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ. ಅದರ ಪ್ರಕಾರ ಐದು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಂದ ನಿವೃತ್ತನಾದ ಯಾವುದೇ ಆಟಗಾರರರನ್ನು ಅನ್‌ ಕ್ಯಾಪ್ಡ್ ಎಂದು ಪರಿಗಣಿಸಬಹುದು. ಹೀಗಾಗಿ ಮಹೇಂದ್ರ ಸಿಂಗ್‌ ಧೋನಿ ಅವರು ಈ ಬಾರಿ ಮುಂದುವರಿಯಲು ಒಪ್ಪಿದರೆ ಅವರನ್ನು ಅನ್‌ ಕ್ಯಾಪ್ಡ್‌ ಆಟಗಾರ ಪಟ್ಟಿಯಲ್ಲಿ 4 ಕೋಟಿ ರೂ. ಗೆ ಸಿಎಸ್‌ಕೆ ಉಳಿಸಿಕೊಳ್ಳಲಿದೆ.

  ಧೋನಿ ಅವರು ಕಳೆದ ವರ್ಷವೇ ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.

Recent Articles

spot_img

Related Stories

Share via
Copy link
Powered by Social Snap