ಶಿಮ್ಲಾ:
ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಘಟದತ್ತ ಸಾಗುತ್ತಿರುವಂತೆಯೇ ಪಾಕಿಸ್ತಾನ ಮತ್ತು ಭಾರತ ನಡುವಿನ ಸೇನಾ ಸಂಘರ್ಷ ಭುಗಿಲೆದಿದ್ದು, ಟೂರ್ನಿಯ ಒಂದು ಮಹತ್ವದ ಪಂದ್ಯ ರದ್ದಾಗುವಂತೆ ಮಾಡಿದೆ.ನಿನ್ನೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ.
ನಿನ್ನೆ ಧರ್ಮಶಾಲಾದ ಹಿಮಾಚಲ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಆರಂಭಲಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ನಿರ್ಣಾಯಕ ಪಂದ್ಯ ಕಾರಣಾಂತರಗಳಿಂದ ರದ್ದಾಗಿತ್ತು. ಆರಂಭದಲ್ಲಿ ವಿದ್ಯುತ್ ವ್ಯತ್ಯಯದಿಂದ ಪಂದ್ಯ ರದ್ದಾಗಿದೆ ಎಂದು ಭಾವಿಸಲಾಗಿತ್ತಾದರೂ ಬಳಿಕ ಅದು ಸಂಭಾವ್ಯ ದಾಳಿಯ ಮುನ್ನೆಚ್ಚರಿಕಾ ಕ್ರಮವಾಗಿ ರದ್ದು ಮಾಡಲಾಗಿದೆ ಎಂದು ತಿಳಿದುಬಂದಿತು.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ ಭರ್ಜರಿ ಆರಂಭ ಪಡೆಯಿತು, ಮೊದಲ ವಿಕೆಟ್ ಗೆ ಪಂಜಾಬ್ ಪರ 122 ರನ್ ಜೊತೆಯಾಟ ದಾಖಲಾಯಿತು. ಪಂಜಾಬ್ ಪರ ಆರಂಭಕರಾಗಿ ಕಣಕ್ಕಿಳಿದ ಪ್ರಿಯಾಂಶ್ ಆರ್ಯ (70 ರನ್) ಮತ್ತು ಪ್ರಭ್ ಸಿಮ್ರನ್ (ಅಜೇಯ 50 ರನ್) ಉತ್ತಮ ಆರಂಭ ನೀಡಿದರು.
ಈ ಹಂತದಲ್ಲಿ ನಟರಾಜನ್ ಬೌಲಿಂಗ್ ನಲ್ಲಿ ಪ್ರಿಯಾಂಶ್ ಆರ್ಯ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ನಾಯಕ ಶ್ರೇಯಸ್ ಅಯ್ಯರ್ ಕ್ರೀಸ್ ಗೆ ಬಂದ ವೇಳೆ ಮೈದಾನದಲ್ಲಿ ಇದ್ದಕ್ಕಿದ್ದಂತೆಯೇ ಕರೆಂಟ್ ಹೋಯಿತು. ಈ ವೇಳೆ ಮೈದಾನದಲ್ಲಿ ಅಳವಡಿಸಲಾಗಿದ್ದ 4 ಫ್ಲಟ್ ಗಳ ಪೈಕಿ ಮೂರು ಕೈಕೊಟ್ಟವು. ಸುಮಾರು ಹೊತ್ತು ಕಳೆದರೂ ಕರೆಂಟ್ ಬರಲಿಲ್ಲ.
ಇನ್ನು ಅಷ್ಟು ಹೊತ್ತಿಗಾಗಲೇ ಮೈದಾನದಲ್ಲಿ ಅಧಿಕಾರಿಗಳು ಜನರನ್ನು ಹೊರಗೆ ಕಳುಹಿಸಲು ಮುಂದಾದರು. ಸ್ವತಃ ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಪ್ರೇಕ್ಷಕರನ್ನು ಹೊರಗೆ ಹೋಗುವಂತೆ ಮನವಿ ಮಾಡಿಕೊಂಡರು. ಇದೇ ವೇಳೆ ಧರ್ಮಶಾಲಾದಲ್ಲಿ ಐಪಿಎಲ್ ಪಂದ್ಯವನ್ನು ದಿಢೀರ್ ರದ್ದು ಮಾಡಿ ಅಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸುವ ಸಂದರ್ಭದಲ್ಲಿ ಚಿಯರ್ ಗರ್ಲ್‌ವೊಬ್ಬರು ಮಾಡಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಧರ್ಮಶಾಲಾ ಕ್ರೀಡಾಂಗಣದಲ್ಲಿ ಪಂದ್ಯ ರದ್ದು ಮಾಡುತ್ತಿರುವ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡಲಾಯಿತು.
ಅಲ್ಲದೇ ಶಾಂತ ರೀತಿಯಲ್ಲಿ ಎಲ್ಲರೂ ಹೊರಗೆ ಹೋಗುವಂತೆ ಸೂಚನೆ ನೀಡಲಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ಆಟಗಾರರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಐಪಿಎಲ್ ಚಿಯರ್ ಗರ್ಲ್ ಅವರಲ್ಲಿ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಆ ಭಯಾನಕ ಕ್ಷಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಪಂದ್ಯ ನಡೆಯುತ್ತಿರುವಾಗಲೇ ಪಂದ್ಯವನ್ನು ರದ್ದು ಮಾಡಲಾಯಿತು. ಕ್ರೀಡಾಂಗಣದಲ್ಲಿ ಇರುವವರಿಗೆ ಹೊರಗೆ ಹೋಗುವಂತೆ ಮನವಿ ಮಾಡಲಾಯಿತು. ಇಲ್ಲಿ ತುಂಬಾ ಭಯದ ವಾತಾವರಣ ನಿರ್ಮಾಣವಾಗಿದೆ. ಬಾಂಬ್‌ಗಳು ಬೀಳುತ್ತಿದ್ದು. ಇಲ್ಲಿನ ಜನ ಕಿರುಚಾಡುತ್ತಿದ್ದಾರೆ. ಇಲ್ಲಿ ತುಂಬಾ ಭಯಾನಕವಾದ ವಾತಾವರಣ ನಿರ್ಮಾಣವಾಗಿದೆ. ನನಗೆ ಕಣ್ಣೀರು ಬರುತ್ತಿಲ್ಲ. ಆದರೆ, ಆಘಾತಕ್ಕೆ ಒಳಗಾಗಿದ್ದೇನೆ ಎಂದು ಆ ಯುವತಿ ಹೇಳಿರುವುದು ವಿಡಿಯೋದಲ್ಲಿ ಇದೆ.
