ಬೆಂಗಳೂರು:
ಐಪಿಎಲ್ 18ನೇ ಆವೃತ್ತಿಯ ಪಂದ್ಯಗಳ ಆರಂಭಕ್ಕೆ ಕ್ಷಣಗಣನೆ ಆರಂಭ ವಾಗಿದೆ. ಈ ಹಿಂದಿನ 17 ಆವೃತ್ತಿಗಳಲ್ಲಿ ಬೆಂಗಳೂರು ರಾಯಲ್ ಚಾಲೆಂಜರ‍್ಸ್ ಒಂದೇ ಒಂದು ಸಲ ಕಪ್ ಗೆದ್ದಿಲ್ಲ. ಆದರೆ ಪ್ರತೀ ಸೀಸನ್‌ನಲ್ಲೂ ‘ಕಪ್ ನಮ್ದೇ’ ಎಂಬ ಲೆಕ್ಕಾಚಾರ ಮತ್ತು ಅಮಿತ ನಿರೀಕ್ಷೆಗಳೊಂದಿಗೆ ಆರ್‌ಸಿಬಿ ಅಭಿಮಾನಿಗಳು ತಂಡವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಸೋಲಿನ ಮೇಲೆ ಸೋಲು ಕಂಡರೂ ತಂಡದ ಮೇಲೆ ಅಭಿಮಾನಿಗಳ ನಿಷ್ಠೆ ಕೊಂಚವೂ ಬದಲಾಗಿಲ್ಲ. ಪ್ರತಿ ವರ್ಷ ತವರಿನ ಕ್ರೀಡಾಂಗಣದಲ್ಲಿ ನಡೆಯುವ ಒಂದೊಂ ದು ಪಂದ್ಯ ಗಳಿಗೂ ಕ್ರೀಡಾಂಗಣ ತುಂಬಿ ತುಳುಕುತ್ತಿರುತ್ತದೆ. ಇದೀಗ ಈ ಈ ಜನಪ್ರಿಯತೆ ಯನ್ನೇ ಬಳಸಿಕೊಳ್ಳಲು ಮುಂದಾಗಿರುವ ಪ್ರಾಂಚೈಸಿ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಅಧಿಕಾರಿಗಳು 18ನೇ ಆವೃತ್ತಿಯ ಪಂದ್ಯಗಳ ವೀಕ್ಷಣೆಗೆ ದುಬಾರಿ ಟಿಕೆಟ್ ಶುಲ್ಕ ನಿಗದಿ ಪಡಿಸಿವೆ.
ಈ ಬಾರಿ ಕನಿಷ್ಠ 2300 ರು.ಗಳಿಂದ ಆರಂಭವಾಗಿ ಗರಿಷ್ಠ 58800 ರು. ತನಕವೂ ಟಿಕೆಟ್ ಶುಲ್ಕ ನಿಗದಿಪಡಿಸಲಾಗಿದೆ. ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ, ನಾಯಕ ರಜತ್ ಪಾಟೀದಾರ್ ಸೇರಿದಂತೆ ಆರ್‌ಸಿಬಿ ಬಳಗದ ಆಟಗಾರರ ಆಟವನ್ನು ಮೈದಾನದಲ್ಲಿಯೇ ನೇರ ಬಂದು ಕಣ್ತುಂಬಿಕೊಳ್ಳಬೇಕೆಂಬ ಉತ್ಸಾಹದಲ್ಲಿರುವ ಆರ್‌ಸಿಬಿಯ ಅಭಿಮಾನಿಗಳಿಗೆ ಈ ಸಲದ ಐಪಿಎಲ್ ಟಿಕೆಟ್ ದರ ಕೇಳಿ ಶಾಕ್ ಆಗಿದೆ. ದೇಶದ ಇತರ ಯಾವುದೇ ಏಳು ಫ್ರಾಂಚೈಸಿಯ ಟಿಕೆಟ್ ದರವು ಬೆಂಗಳೂರಿನ ಆರ್‌ಸಿಬಿ ಪಂದ್ಯದ ಅರ್ಧದಷ್ಟಿಲ್ಲ ಎಂಬುದು ಗಮನಾರ್ಹ.
ತನ್ನ ತವರು ಮೈದಾನದಲ್ಲಿ ಆರ್‌ಸಿಬಿ ಈ ಸಲ 7 ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಏಪ್ರಿಲ್೨ರಂದು ಎದುರಿಸಲಿದೆ. ಈ ಬಾರಿ ಜಿ. ವಿಶ್ವನಾಥ್ ಹೆಸರಿನ ವಿಐಪಿ ಸ್ಟ್ಯಾಂಡ್‌ಗೆ ರು.42000ದಿಂದ 58800 ತನಕ ರ ನಿಗದಿಯಾಗಿದೆ. ಹಾಗೆಯೇ ಕನಿಷ್ಠ ದರವು ರು. 2300ರಿಂದ ಆರಂಭವಾಗಿದೆ. ಟಿಕೆಟ್ ದರ ಭಾರೀ ಏರಿಕೆ ಕಂಡಿದ್ದರೂ ಆ ಪಂದ್ಯದ ಬಹುತೇಕ ಟಿಕೆಟ್‌ಗಳಂತೂ ಬಿಕರಿಯಾಗಿವೆ. ಹಾಗೆಯೇ ಈ ಗರಿಷ್ಠ ಮತ್ತು ಕನಿಷ್ಠ ಟಿಕೆಟ್ ದರಗಳ ಮಧ್ಯೆ ರು. 35000, 19500, 13000, 7800, 4290 ರು. ಮೌಲ್ಯದ ಟಿಕೆಟ್‌ಗಳನ್ನು ವಿತರಿಸಲಾಗುತ್ತಿದೆ.
ಕಳೆದ ವರ್ಷ ಪಂದ್ಯವೊಂದಕ್ಕೆ ಇದ್ದ ಕನಿಷ್ಠ ದರ ರು. 800ರಿಂದ 1200 ಮತ್ತು ಗರಿಷ್ಠ ದರ ರು. 28000ದಿಂದ 32000 ಆಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕನಿಷ್ಠ ದರ ಏಕಾಏಕಿ ದುಪ್ಪಟ್ಟಾದರೂ ವೆಬ್‌ಸೈಟ್ ಮೂಲಕ ಹಾಗೂ ಆರ್‌ಬಿಸಿ ವೆಬ್‌ಸೈಟ್ ಮೂಲಕವೂ ಸಾವಿರಾರು ಟಿಕೆಟ್‌ಗಳು ಬಿಕರಿಯಾಗಿವೆ.
ಕಳೆದ ಕೆಲವು ವರ್ಷಗಳಿಂದ ಆರ್‌ಸಿಬಿ ತಂಡವು ಐಪಿಎಲ್ ಆರಂಭಕ್ಕೂ ಮುನ್ನ ‘ಅನ್ ಬಾಕ್ಸ್’ ಎಂಬ ಕಾರ್ಯಕ್ರಮ ಏರ್ಪಡಿಸುತ್ತದೆ. ಚಿನ್ನಸ್ವಾಮಿ ಮೈದಾನದಲ್ಲಿ ಇದೊಂದು ಸ್ಟೇಜ್ ಈವೆಂಟ್ ಆಗಿದ್ದು, ಆರ್‌ಸಿಬಿ ಆಟಗಾರರಿಗೆ ಶುಭ ಹಾರೈಸುವ ಕಾರ್ಯಕ್ರಮ ಇದಾ ಗಿದೆ. ಈ ಕಾರ್ಯಕ್ರಮಕ್ಕೆ ಮಾರ್ಚ್-6ರಂದು ಟಿಕೆಟ್ ಮಾರಾಟ ಆರಂಭಿಸಿದ್ದು, ಸೈಯದ್ ಕಿರ್ಮಾನಿ ಸ್ಟ್ಯಾಂಡ್ ಎಂಟ್ರಿ ರು.5000, ಚಂದ್ರ ಶೇಖರ ಸ್ಟ್ಯಾಂಡ್ ಎಂಟ್ರಿ ದರ ರು.3000 ನಿಗದಿ ಮಾಡಲಾ ಗಿದೆ. ಈ ಕಾರ‍್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಮಾರಾಟ ವಾಗಿದೆ.
