ಆರ್‌ಸಿಬಿ ಸೇರಿ ಐಪಿಎಲ್‌ ತಂಡಗಳ ಮೌಲ್ಯ ಭಾರೀ ಕುಸಿತ!

ನವದೆಹಲಿ

     ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿ ಎನಿಸಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಬ್ರಾಂಡ್​ ಮೌಲ್ಯ  ಗಣನೀಯವಾಗಿ ಕುಸಿದಿದ್ದು, ತಂಡಗಳ ಮೌಲ್ಯದಲ್ಲೂ ಭಾರೀ ಕುಸಿತ ಕಂಡಿದೆ. 18 ವರ್ಷಗಳ ಬಳಿಕ ತನ್ನ ಮೊದಲ ಪ್ರಶಸ್ತಿ ಗೆದ್ದ ಆರ್‌ಸಿಬಿ  ತಂಡ ₹876.75 ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ.

    ಹಾಲಿ ಚಾಂಪಿಯನ್‌ ಆರ್‌ಸಿಬಿ ಸೇರಿದಂತೆ ಬಹುತೇಕ ಎಲ್ಲಾ ತಂಡಗಳ ಮೌಲ್ಯ ಕುಸಿದಿದೆ. ಆರ್‌ಸಿಬಿ ಮೌಲ್ಯ ಕಳೆದ ಬಾರಿಗಿಂದ ಶೇ.10ರಷ್ಟು ಕುಸಿತ ಕಂಡಿದೆ. ಗರಿಷ್ಠ ಪ್ರಮಾಣದಲ್ಲಿ ಮೌಲ್ಯ ಕುಸಿತ ಕಂಡ ತಂಡ ರಾಜಸ್ಥಾನ ರಾಯಲ್ಸ್‌. ತಂಡದ ಮೌಲ್ಯ ಶೇ.35ರಷ್ಟು ಕುಸಿದಿದೆ.

   ಉಳಿದಂತೆ ಸನ್‌ರೈಸರ್ಸ್‌ ಹೈದರಾಬಾದ್‌ನ ಮೌಲ್ಯ ಶೇ.34, ಕೆಕೆಆರ್‌ ಮೌಲ್ಯ ಶೇ.33, ಡೆಲ್ಲಿ ಮೌಲ್ಯ ಶೇ.26, ಚೆನ್ನೈ ಶೇ.24, ಮುಂಬೈ ಶೇ.9, ಪಂಜಾಬ್‌ ಶೇ.3, ಲಖನೌ ಮೌಲ್ಯ ಶೇ.2ರಷ್ಟು ಕುಸಿತ ಕಂಡಿದೆ. 10 ತಂಡಗಳ ಪೈಕಿ ಗುಜರಾತ್‌ ಟೈಟಾನ್ಸ್ ಮೌಲ್ಯ ಮಾತ್ರ ಏರಿಕೆಕಂಡಿದ್ದು, ಶೇ.2ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಒಟ್ಟಾರೆ ಐಪಿಎಲ್‌ನ ಬ್ರಾಂಡ್ ಮೌಲ್ಯವೂ ಕುಸಿದಿದ್ದು, 2024ಕ್ಕೆ ಹೋಲಿಸಿದರೆ ಶೇ.20ರಷ್ಟು ಕುಸಿತವಾಗಿದೆ ಎಂದು ಬ್ರಾಂಡ್ ಫೈನಾನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿಮೊನ್ ಫ್ರಾನ್ಸಿಸ್ ಹೇಳಿದ್ದಾರೆ.

   ಸೀಸನ್-19ರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ 16ರಂದು ಅಬುಧಾಬಿಯಲ್ಲಿ ನಡೆಯಲಿದ್ದು, ಎಲ್ಲಾ ತಂಡಗಳು ಸಿದ್ದತೆ ನಡೆಸುತ್ತಿವೆ. ಹರಾಜು ಪಟ್ಟಿಯಲ್ಲಿ 112 ಭಾರತೀಯರು ಮತ್ತು 238 ವಿದೇಶಿ ಕ್ರಿಕೆಟಿಗರು ಸೇರಿದಂತೆ 350 ಆಟಗಾರರಿದ್ದು, ಗರಿಷ್ಠ 77 ಸ್ಥಾನಗಳು ಲಭ್ಯವಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಕಾರಣ ಸ್ಥಗಿತಗೊಂಡಿದ್ದ ಐಪಿಎಲ್‌ ಹಾಗೂ ಇತರ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ತಿಳಿಸಿದ್ದರು.

  ‘ನಮಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸಬೇಕು ಎಂಬ ಉದ್ದೇಶವಿಲ್ಲ. ಆದರೆ, ಜನಜಂಗುಳಿಯಾದರೆ ಅದನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಆಲೋಚಿಸಬೇಕು. ಜೊತೆಗೆ, ಮೈಕಲ್ ಡಿ.ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ, ಹಂತವಾಗಿ ಪಾಲನೆ ಮಾಡುವುದು ನಮ್ಮ ಆಲೋಚನೆ. ಇದನ್ನು ವೆಂಕಟೇಶ್ ಪ್ರಸಾದ್ ಕೂಡ ಒಪ್ಪಿಕೊಂಡಿದ್ದಾರೆ. ನಮ್ಮ ರಾಜ್ಯದ ಗೌರವ, ಸ್ವಾಭಿಮಾನಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ದವಾಗಿದೆ’ ಎಂದಿದ್ದರು.

Recent Articles

spot_img

Related Stories

Share via
Copy link