ಹಿಜಾಬ್‌ ಧರಿಸದೇ ಆನ್ಲೈನ್‌ ಕನ್ಸರ್ಟ್‌ನಲ್ಲಿ ಭಾಗಿ ; ಇರಾನ್‌ ಗಾಯಕಿಯ ವಿರುದ್ದ ಕಾನೂನು ಕ್ರಮ

ಟೆಹ್ರಾನ್:‌

    ಮಹಿಳೆಯರಿಗೆ ಇರಾನ್‌  ದೇಶದಲ್ಲಿ ಕಟ್ಟುನಿಟ್ಟಾದ ವಸ್ತ್ರ ಸಂಹಿತೆ ಇರುವುದು ಹಲವರಿಗೆ ಗೊತ್ತಿದೆ. ಆದರೆ ಆ ಕಾನೂನನ್ನು ಉಲ್ಲಂಘಿಸಿ ಹಿಜಾಬ್ ಧರಿಸದೇ ಆನ್‌ಲೈನ್ ಕನ್ಸರ್ಟ್‌ನಲ್ಲಿ ಗಾಯಕಿಯೊಬ್ಬರು ಪ್ರದರ್ಶನ ನೀಡಿದ್ದಾರೆ. ಇರಾನ್‌ನ ಖ್ಯಾತ ಗಾಯಕಿಯಾದ ಪರಸೂ ಅಹ್ಮದಿ ಎಂಬುವವರು ಇದೀಗ ಕಾನೂನು ಕ್ರಮವನ್ನು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ 

     ಯೂಟ್ಯೂಬ್‌ನಲ್ಲಿ ಪ್ರಸಾರವಾದ ಸಂಗೀತ ಕಚೇರಿಯಲ್ಲಿ ಭಾಗವಹಿಸಿದ್ದ ಪರಸೂ ಅಹ್ಮದಿ ಮತ್ತು ಅವರ ತಂಡದ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇರಾನ್ ನ್ಯಾಯಾಂಗವು ಘೋಷಿಸಿದೆ. ಕಾರ್ಯಕ್ರಮದಲ್ಲಿ ಗಾಯಕಿ ಪರೂಸ್‌ ಅಹ್ಮದಿ ತಮ್ಮ ಬ್ಯಾಂಡ್‌ನೊಂದಿಗೆ ನಡೆಸಿಕೊಟ್ಟ ಕಾರ್ಯಕ್ರಮದ ವಿಡಿಯೊವನ್ನು ಇರಾನ್‌ನ ಕಾರವಾನ್‌ಸೆರೈನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇರಾನಿನ ಕಾನೂನಿನ ಪ್ರಕಾರ, ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಆದರೆ ಪರೂಸ ಅಹ್ಮದಿ ಅವರು ಸ್ಲೀವ್‌ ಲೆಸ್ ಬ್ಲ್ಯಾಕ್‌ ಕಲರ್ ಡ್ರೆಸ್ ಹಾಕಿದ್ದು, ಹಿಜಾಬ್ ಅನ್ನು ಧರಿಸದೆ ಫ್ರೀ ಹೇರ್‌ನಲ್ಲಿದ್ದಾರೆ. ಅಲ್ಲದೆ ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ, “ನಾನು ಪರಸ್ಪೂ, ಮೌನವಾಗಿರಲು ನನ್ನಿಂದ ಸಾಧ್ಯವಿಲ್ಲ. ನಾನು ಪ್ರೀತಿಸುವ ದೇಶಕ್ಕಾಗಿ ಹಾಡುವುದನ್ನು ನಿಲ್ಲಿಸಲಾಗುವುದಿಲ್ಲ. ಮುಕ್ತ ಹಾಗೂ ಸುಂದರ ರಾಷ್ಟ್ರದ ಕನಸು ಕಾಣುತ್ತಿದ್ದೇನೆ. ಈ ಆನ್ಲೈನ್‌ ಸಂಗೀತ ಕಚೇರಿಯಲ್ಲಿ ನನ್ನ ಧ್ವನಿಯನ್ನು ಆಲಿಸಿ” ಎಂಬ ಸಂದೇಶವನ್ನು ನೀಡಿದ್ದಾರೆ. ಕಾನೂನು ಮತ್ತು ಧಾರ್ಮಿಕ ಕಟ್ಟಳೆಯನ್ನು ಅನುಸರಿಸದೆ ಕನ್ಸರ್ಟ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಮಹಿಳಾ ಗಾಯಕಿ ನೇತೃತ್ವದ ಗುಂಪಿನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೋರ್ಟ್ ಹೇಳಿದೆ.

   1979ರ ಇಸ್ಲಾಮಿಕ್ ಕ್ರಾಂತಿಯ ನಂತರ ವಿಧಿಸಲಾದ ಕಠಿಣ ನಿಯಮಗಳ ಪ್ರಕಾರ ಇರಾನ್ ಮಹಿಳೆಯರು ಸಾರ್ವಜನಿಕವಾಗಿ ತಮ್ಮ ಕೂದಲನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬೇಕು. ಅಲ್ಲದೆ, ಅವರಿಗೆ ಸಾರ್ವಜನಿಕವಾಗಿ ಹಾಡಲು ಅವಕಾಶವಿಲ್ಲ. ಶುಕ್ರವಾರ ಜಾರಿಗೆ ಬಂದ ಹೊಸ ಕಾನೂನಿನ ಅನುಷ್ಠಾನದ ಬೆನ್ನಲ್ಲೇ ಅಹ್ಮದಿ ಅವರ ಸಂಗೀತ ಕಛೇರಿ ಲೈವ್‌ ಸ್ಟ್ರೀಮಿಂಗ್ ನಡೆದಿದೆ. ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ “Promotion of the Culture of Chastity and Hijab” ಕಾನೂನಿನ ಅಡಿಯಲ್ಲಿ ಮಹಿಳೆಯರು ತಪ್ಪಿತಸ್ಥರಾಗಿದ್ದರೆ ಮರಣದಂಡನೆಯನ್ನು ಎದುರಿಸಬೇಕಾಗುತ್ತದೆ ಎಂಬ ಮಾಹಿತಿಯಿದೆ. 

   ಇರಾನ್‌ನಲ್ಲಿ ಹಿಜಾಬ್‌ ವಿರುದ್ಧದ ಬಹುದೊಡ್ಡ ಪ್ರತಿಭಟನಾ ಅಭಿಯಾನಕ್ಕೆ ಕಾರಣರಾಗಿದ್ದ 22ರ ಹರೆಯದ ಮೆಹ್ಸಾ ಅಮೀನಿ 2ನೇ ವರ್ಷದ ಪುಣ್ಯಸ್ಮರಣೆಯ ಭಾಗವಾಗಿ ಇರಾನ್‌ನಲ್ಲಿ ಕೆಲ ತಿಂಗಳ ಹಿಂದೆ ಮಹಿಳೆಯರು ಬೀದಿಗಿಳಿದಿದ್ದರು. ಟೆಹರಾನ್‌ನ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಹಿಜಾಬ್‌ ಧರಿಸದೆ, ಕೂದಲನ್ನು ಬಿಚ್ಚಿಕೊಂಡು “ಮಹಿಳೆ, ಜೀವನ ಮತ್ತು ಸ್ವಾತಂತ್ರ್ಯ’ ಎಂಬ ಘೋಷಣೆಗಳನ್ನು ಕೂಗುತ್ತಾ ಆಯತುಲ್ಲಾ ಅಲಿ ಖಮೆನೀ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ ಜೈಲಿನಲ್ಲಿರುವ ಹಲವು ಮಹಿಳೆಯರು ಉಪವಾಸ ಸತ್ಯಾಗ್ರಹ ಕೈಗೊಂಡು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಸಾಮಾಜಿಕ ಜಾಲತಾಣಗಳನ್ನೂ ಬಳಸಿ ಹಲವರು ಪ್ರತಿಭಟನೆ ನಡೆಸಿದ್ದರು.