ಬೆಂಗಳೂರು:
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಕ್ಕಲಿಗ ಮತಗಳನ್ನು ತಂದುಕೊಡಲು ವಿಫಲರಾದ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಹೈಕಮಾಂಡ್ ಗೆ ವರದಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಷ್ಠಾವಂತರು ತಂತ್ರ ರೂಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿಸಿದ ಪ್ರಮಾಣದಲ್ಲಿ ಒಕ್ಕಲಿಗ ಮತಗಳನ್ನು ಸೆಳೆಯಲು ಡಿಸಿಎಂ ಡಿಯಕೆ ಶಿವಕುಮಾರ್ ವಿಫಲರಾಗಿದ್ದಾರೆಂಬ ವಿಷಯವನ್ನು ಹೈಕಮಾಂಡ್ ಗೆ ಮುಟ್ಟಿಸಲು ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ಸಚಿವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ
ಆದರೆ ಈ ತಂತ್ರಕ್ಕೆ ತಿರುಗೇಟು ನೀಡಲು ಡಿಎಸಿಎಂ ಡಿ.ಕೆ ಶಿವಕುಮಾರ್ ಮತ್ತೊಂದು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಖಾಸಗಿ ಏಜೆನ್ಸಿಯೊಂದರ ಸಮೀಕ್ಷೆ ಆಧರಿಸಿ ಡಿಕೆ ಶಿವಕುಮಾರ್ ವರದಿ ಸಿದ್ಧಪಡಿಸಿದ್ದಾರೆ. ವರದಿಯ ಪ್ರಕಾರ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳ ಮತದಾರರು ಸಹ ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ, ವಿಶೇಷವಾಗಿ ಹಳೇ ಮೈಸೂರು ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿಲ್ಲಎಂದು ಹೇಳಲಾಗಿದೆ.
ಶಿವಕುಮಾರ್ ಅವರು ಪಕ್ಷದ ಹೈಕಮಾಂಡ್ ಮುಂದೆ ವರದಿಯನ್ನು ಮಂಡಿಸಿ ಸಿದ್ದರಾಮಯ್ಯ ನಿಷ್ಠರನ್ನು ಕೆಣಕಬಹುದು. ಈ ಸಮುದಾಯಗಳು ಕಾಂಗ್ರೆಸ್‌ನೊಂದಿಗೆ ಇಲ್ಲ ಎಂಬ ಅಂಶವನ್ನು ಅವರು ಹೈಕಮಾಂಡ್ ಗಮನಕ್ಕೆ ತರಲು ಬಯಸುತ್ತಾರೆ. ಸಿದ್ದರಾಮಯ್ಯ ಅವರು ಹಿಂದುಳಿದ ಸಮುದಾಯದಿಂದ ಬಂದಿದ್ದರಿಂದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ ಕುರುಬರು ಕೂಡ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸಲಿಲ್ಲ. ಹಾಸನ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಪಕ್ಷ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಏತನ್ಮಧ್ಯೆ, ಮಾಜಿ ಸಚಿವ ವಿನಯ್ ಕುಲಕರ್ಣಿ ನೇತೃತ್ವದ ಸುಮಾರು 15 ವೀರಶೈವ-ಲಿಂಗಾಯತ ಶಾಸಕರ ನಿಯೋಗ ಶೀಘ್ರದಲ್ಲೇ ನವದೆಹಲಿಯಲ್ಲಿ ಪಕ್ಷದ ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಯಿದೆ. ಸಿದ್ದರಾಮಯ್ಯ ನಿಷ್ಠಾವಂತರು ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರ ವಿರುದ್ಧ ದೂರು ಸಲ್ಲಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿಗಳಿಗೆ ಆಪ್ತರಾಗಿರುವ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಈ ಶಾಸಕರು ದೂರು ನೀಡಬಹುದು ಎಂದು ಮೂಲಗಳು ತಿಳಿಸಿವೆ.