ಬೆಂಗಳೂರು:
2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಮಣಿಸಲು ಸಿಎಂ ಸಿದ್ದರಾಮಯ್ಯ ಪಾಳಯದ ಹಲವು ಸಚಿವರು ಭರ್ಜರಿ ಪ್ಲಾನ್ ಮಾಡುತ್ತಿದ್ದಾರೆ.
ಸದ್ಯ ಉಪ ಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ.ಲೋಕಸಭೆ ಚುನಾವಣೆ ಫಲಿತಾಂಶವನ್ನು ಮುಂದಿಟ್ಟುಕೊಂಡು ಡಿ ಕೆ ಶಿವಕುಮಾರ್ ಹಣಿಯಲು ಸಿದ್ದು ಬೆಂಬಲಿಗರು ಹುನ್ನಾರ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವಕುಮಾರ್ ಮಾಸ್ ಲೀಡರ್ ಅಲ್ಲ, ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೈಬಿಡಬೇಕು ಎಂದು ಪಕ್ಷದ ಹೈಕಮಾಂಡ್‌ಗೆ ತಿಳಿಸಿದ್ದಾರೆ. ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ತಮ್ಮದೇ ವ್ಯಕ್ತಿಯನ್ನು ಕರೆತರಲು ಯೋಜನೆ ರೂಪಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಮತ ಕಾಂಗ್ರೆಸ್‌ಗೆ ಬರುವಂತೆ ಮಾಡಲು ಶಿವಕುಮಾರ್ ವಿಫಲರಾಗಿದ್ದಾರೆ ಎಂದು ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗಗಳ ಸಚಿವರು ಹೈಲೈಟ್ ಮಾಡುವ ಸಾಧ್ಯತೆಯಿದೆ.
ಇನ್ನೂ ಇದೆಲ್ಲದರ ನಡುವೆ ಚನ್ನಪಟ್ಟಣದ ತಿಟ್ಟಮಾರನಹಳ್ಳಿಯಲ್ಲಿ ಬುಧವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜನರೊಂದಿಗೆ ಸಂವಾದ ನಡೆಸಿದರು. ಶಿವಕುಮಾರ್ ಇತ್ತೀಚೆಗೆ ಒಕ್ಕಲಿಗ ಶಾಸಕರಿಗೆ ಔತಣಕೂಟ ಏರ್ಪಡಿಸಿ ತನ್ನನ್ನು ಸಮುದಾಯದ ನಾಯಕನನ್ನಾಗಿ ಬಿಂಬಿಸಿಕೊಳ್ಳಲು ಹೊರಟಿದ್ದರಿಂದ ತೊಂದರೆ ಶುರುವಾಗಿದೆ. ಇದು ಸಿದ್ದರಾಮಯ್ಯನವರಿಗೆ ನಿಷ್ಠರಾಗಿರುವ ಸಚಿವರಿಗೆ ಸರಿ ಹೋಗಲಿಲ್ಲ ಮತ್ತು ಅವರು ಹೆಚ್ಚಿನ ಡಿಸಿಎಂ ಹುದ್ದೆಗಳಿಗೆ ಬೇಡಿಕೆಯಿಡಲು ಪ್ರಾರಂಭಿಸಿದರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಸಿಎಂ ಅವರ ನಿಷ್ಠಾವಂತರು ಶಿವಕುಮಾರ್ ಅವರನ್ನು ಅಂಕುಶದಲ್ಲಿಡಲು ಬಯಸಿದ್ದು ಡಿಕೆಶಿ ಪ್ರಭಾವವನ್ನು ಕಡಿಮೆ ಮಾಡಲು ಅವರು ಹೆಚ್ಚಿನ ಡಿಸಿಎಂ ಹುದ್ದೆಗಳ ವಿಷಯವನ್ನು ಆಗಾಗ್ಗೆ ಎತ್ತುತ್ತಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು. ತಮ್ಮನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂದು ಸಹಕಾರ ಸಚಿವ ಹಾಗೂ ಎಸ್ ಟಿ ಮುಖಂಡ ಕೆ.ಎನ್.ರಾಜಣ್ಣ ಇತ್ತೀಚೆಗೆ ಶಿವಕುಮಾರ್ ಗೆ ಟಾಂಗ್ ನೀಡಿದ್ದರು.
ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಕೂಡ ಎಸ್ ಟಿ ನಾಯಕರಾಗಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡಸುತ್ತಿದ್ದಾರೆ. ಸತೀಶ್ ಅವರು ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಲೋಕಸಭೆಗೆ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದರೆ, ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ.ಸುರೇಶ್ ಅವರ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂಬುದು ಸಿದ್ದರಾಮಯ್ಯ ನಿಷ್ಟಾವಂತರ ಮಾತು.
ಆದರೆ ಪಕ್ಷದ ಹೈಕಮಾಂಡ್ ತಕ್ಷಣವೇ ಶಿವಕುಮಾರ್ ಅವರನ್ನು ಬದಲಾಯಿಸದೆ ಇರಬಹುದು ಮತ್ತು ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಅಥವಾ ಬೇರೆ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಶಿವಕುಮಾರ್ ಅವರನ್ನು ಮಹಾರಾಷ್ಟ್ರದ ಉಸ್ತುವಾರಿ ನೀಡುವುದರೊಂದಿಗೆ ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸುವ ಸಾಧ್ಯೆತಿಯಿದೆ ಎಂದು ಅವರು ಹೇಳಿದರು. ಒಂದು ವೇಳೆ ಅವರ ಅಲ್ಲಿ ಯಶಸ್ಸು ಕಂಡರೆ ಪಕ್ಷವು ಅವರಿಗೆ ಸಿಎಂ ಸ್ಥಾನವನ್ನು ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ಡಿಸಿಎಂಗಳ ಬೇಡಿಕೆಗೆ ಮಂಗಳವಾರ ಮಂಗಳೂರಿನಲ್ಲಿ ಶಿವಕುಮಾರ್ ತಿರುಗೇಟು ನೀಡಿದರು, “ಮಾಧ್ಯಮಗಳು ಪ್ರತಿದಿನ ಈ ಬಗ್ಗೆ ಸುದ್ದಿ ಮಾಡುತ್ತಿವೆ. ಈ ಪ್ರಶ್ನೆಗಳಿಗೆ ಪಕ್ಷ ಉತ್ತರ ನೀಡಲಿದೆ. ಇದನ್ನು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅಥವಾ ಸುರ್ಜೇವಾಲಾ, ಕರ್ನಾಟಕದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಥವಾ ಸಿಎಂಗೆ ಕೇಳಿ ಎಂದು ಕಿಡಿ ಕಾರಿದರು.