ವಾಷಿಂಗ್ಟನ್:
ಗಾಜಾ ಪಟ್ಟಿ ಆಕ್ರಮಿಸುವ ಇಸ್ರೇಲ್ ನಡೆಗೆ ಅಮೆರಿಕ ವಿರೋಧ ವ್ಯಕ್ತಪಡಿಸಿದೆ. ಇದು ಇಸ್ರೇಲಿ ಜನರಿಗೆ ಒಳ್ಳೆಯದಲ್ಲ ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯನ್ನು ಮರು ಆಕ್ರಮಿಸಿಕೊಳ್ಳುವುದು ಸರಿಯಾದ ಕೆಲಸವಲ್ಲ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಉಲ್ಲೇಖಿಸಿದೆ.
ಇಸ್ರೇಲಿ ಯೋಧರು ಗಾಜಾ ನಗರದ ಹೃದಯ ಭಾಗದಲ್ಲಿದ್ದಾರೆ ಎಂದು ಈಚೆಗೆ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಯ ವಕ್ತಾರ ಜಾನ್ ಕಿರ್ಬಿ, ಇಸ್ರೇಲಿ ಪಡೆಗಳಿಂದ ಗಾಜಾವನ್ನು ಮರು ಆಕ್ರಮಣ ಮಾಡುವುದು ಒಳ್ಳೆಯದಲ್ಲ ಎಂದು ಅಧ್ಯಕ್ಷರು (ಜೋ ಬೈಡೆನ್) ಭಾವಿಸಿದ್ದಾರೆ. ಇದು ಇಸ್ರೇಲ್ ಹಾಗೂ ದೇಶದ ಜನತೆಗೆ ಒಳ್ಳೆಯದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸ್ನೇಹಿತರು, ಹಾಗೆಂದ ಮಾತ್ರಕ್ಕೆ ನಾವು ಪ್ರತಿಯೊಂದು ವಿಷಯವನ್ನು ಒಪ್ಪಿಕೊಳ್ಳಬೇಕಾಗಿಲ್ಲ, ನೆತನ್ಯಾಹು ಮತ್ತು ಬಿಡೆನ್ ಯಾವಾಗಲೂ ಪ್ರತಿಯೊಂದು ವಿಷಯಕ್ಕೂ ಜೊತೆಯಾಗಿರುವುದಿಲ್ಲ.
ಭವಿಷ್ಯದ ದಾಳಿಗಳನ್ನು ತಡೆಗಟ್ಟಲು ಹೋರಾಟ ಮುಗಿದ ನಂತರ ಇಸ್ರೇಲ್, ಗಾಜಾ ಪಟ್ಟಿಯ ಸುರಕ್ಷತೆಯ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ನೆತನ್ಯಾಹು ಹೇಳಿಕೆ ನೀಡಿದ್ದಾರೆ. ಇದಕ್ಕೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಎಚ್ಚರಿಕೆಯ ಮಾತನ್ನಾಡಿದೆ.
ಗಾಜಾವನ್ನು ಇಸ್ರೇಲ್ ಆಕ್ರಮಿಸಿಕೊಳ್ಳುವುದು ದೊಡ್ಡ ತಪ್ಪು ಎಂದು ಕೆಲ ದಿನಗಳ ಹಿಂದೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಭಿಪ್ರಾಯಪಟ್ಟಿದ್ದರು. ಇದೇ ಸಂದರ್ಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಇಸ್ರೇಲಿ ರಾಯಭಾರಿ ಮೈಕೆಲ್ ಹೆರ್ಜೋಗ್, ಇಸ್ರೇಲ್ ಸಂಘರ್ಷ ಕೊನೆಗೊಂಡ ನಂತರ ಗಾಜಾವನ್ನು ವಶಪಡಿಸಿಕೊಳ್ಳಲು ಉದ್ದೇಶಿಸುವುದಿಲ್ಲ ಎಂದು ಹೇಳಿದ್ದರು.