ಆಂಧ್ರ ಪ್ರದೇಶ
ಚಂದ್ರಯಾನ-2ನ್ನು ಸುಲಭವಾಗಿ ಚಂದ್ರನ ಮೇಲೆ ಇಳಿಸಲು ವಿಫಲವಾದರೂ ಕೂಡ ಕುಗ್ಗದ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಜ್ಞಾನಿಗಳು ಇದೀಗ ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆಗೆ ಸಜ್ಜಾಗಿದ್ದಾರೆ. ಅದರ ಉಡಾವಣೆಗೆ ಇಂದು ಕ್ಷಣಗಣನೆ ಆರಂಭವಾಗಿದ್ದು, ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವುದು ಉಡ್ಡಯನದ ಉದ್ದೇಶವಾಗಿದೆ.
ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನವಾಗಲಿದೆ. ಇಸ್ರೊದ 6 ವಾರಗಳ ಕಾರ್ಯಾಚರಣೆ ಇಂದು ಆರಂಭವಾಗುತ್ತಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ. ಚಂದ್ರಯಾನ-3 ಉಪಗ್ರಹವನ್ನು ಎಲ್ ವಿಎಂ3 ರಾಕೆಟ್ ಇಂದು ಮಧ್ಯಾಹ್ನ 2.35ಕ್ಕೆ ಹೊತ್ತೊಯ್ಯಲಿದೆ. ಅದಕ್ಕೆ ಅಂತಿಮ ಕ್ಷಣದ ಪೂರ್ವಸಿದ್ಧತೆಗಳು ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.