ಹೈದರಾಬಾದ್
ಮುಂದಿನ ಪ್ರಮುಖ ಉಪಗ್ರಹ ಉಡಾವಣೆಗೂ ಮುನ್ನ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ಯ ತಂಡವು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆಯಿತು.ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹಿರಿಯ ವಿಜ್ಞಾನಿಗಳೊಂದಿಗೆ ತಿರುಮಲ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಪ್ರಮುಖ ಉಡಾವಣೆಗಳಿಗೆ ಮುನ್ನ ದೇವರ ಆಶೀರ್ವಾದವನ್ನು ಪಡೆಯುವುದು ಇಸ್ರೋ ಸಂಸ್ಥೆ ಹಿಂದಿನಿಂದಲೂ ನಡೆಸಿಕೊಂಡ ಬಂದ ಸಂಪ್ರದಾಯ. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಿಷನ್ ಯಶಸ್ಸಿಗಾಗಿ ಪ್ರಾರ್ಥಿಸಿದರು. ಇಸ್ರೋ ವಿಜ್ಞಾನಿಗಳು ಈ ಬಾರಿಯೂ ಪ್ರತಿಯೊಂದು ಪ್ರಮುಖ ಉಡಾವಣೆಗೂ ಮೊದಲು ದಶಕಗಳಿಂದ ಅನುಸರಿಸುತ್ತಿರುವ ಅಭ್ಯಾಸವನ್ನು ಮುಂದುವರಿಸಿದರು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಡಿಸೆಂಬರ್ 24ರಂದು ಸಂವಹನ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ನಡೆಸುತ್ತಿದೆ. LVM3-M6 ಎಂದು ಹೆಸರಿಸಲಾದ ಈ ಕಾರ್ಯಾಚರಣೆಯು ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಹೊತ್ತೊಯ್ಯಲಿದೆ. ಇದನ್ನು ಅಮೆರಿಕ ಮೂಲದ AST ಸ್ಪೇಸ್‌ಮೊಬೈಲ್ ಸಂಸ್ಥೆಯೊಂದಿಗೆ ವಾಣಿಜ್ಯ ಒಪ್ಪಂದದಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಜಾಗತಿಕ ಮಟ್ಟದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಹೈ-ಸ್ಪೀಡ್ ಸೆಲ್‌ಲ್ಯುಲರ್ ಬ್ರಾಡ್‌ಬ್ಯಾಂಡ್ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸಾಮಾನ್ಯ ಮೊಬೈಲ್ ಫೋನ್‌ಗಳಿಗೆ ನೇರ ಸಂಪರ್ಕ ಒದಗಿಸುವ ಮೂಲಕ 4ಜಿ ಮತ್ತು 5ಜಿ ವಾಯ್ಸ್, ಮೆಸೇಜಿಂಗ್, ಸ್ಟ್ರೀಮಿಂಗ್ ಮತ್ತು ಡೇಟಾ ಸೇವೆಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ವಿಶೇಷ ಹಾರ್ಡ್‌ವೇರ್ ಅಗತ್ಯವಿಲ್ಲ.
ಈ ಉಡಾವಣೆಯು ಜಾಗತಿಕ ಉಪಗ್ರಹ ಸಂವಹನದಲ್ಲಿ ಪ್ರಮುಖ ಮೈಲಿಗಲ್ಲಾಗಿ ಪರಿಗಣಿಸಲಾಗುತ್ತಿದೆ. ಏಕೆಂದರೆ ಇದು ವಿಶ್ವದಾದ್ಯಾಂತ ನೇರ-ಉಪಕರಣ ಸೆಲ್‌ಲ್ಯುಲರ್ ಸಂಪರ್ಕವನ್ನು ವಿಸ್ತರಿಸಲು ಉದ್ದೇಶಿಸಿದೆ.LVM3 (ಲಾಂಚ್ ವೆಹಿಕಲ್ ಮಾರ್ಕ್-III), ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಎರಡನೇ ಉಡಾವಣಾ ಪ್ಯಾಡ್‌ನಿಂದ ಉಡಾವಣೆಯಾಗಲಿದೆ. ಬ್ಲೂಬರ್ಡ್ ಬ್ಲಾಕ್-2 ಉಪಗ್ರಹವನ್ನು ಕೆಳ ಭೂಮಿಯ ಕಕ್ಷೆಗೆ ಇರಿಸುವುದು ಈ ಮಿಷನ್‌ನ ಗುರಿ.
ಆಗಸ್ಟ್ 22ರಂದು ದೆಹಲಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ನಡೆದಿತ್ತು. ಈ ವೇಳೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬಹುನಿರೀಕ್ಷಿತ ಭಾರತೀಯ ಅಂತರಿಕ್ಷ ನಿಲ್ದಾಣ (BAS) ಮಾಡ್ಯೂಲ್‌ನ ಮಾದರಿಯನ್ನು ಅನಾವರಣಗೊಳಿಸಿತ್ತು. ಇದು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.
ಭಾರತವು 2028ರ ವೇಳೆಗೆ ತನ್ನದೇ ಆದ ಸ್ವದೇಶಿ ನಿರ್ಮಿತ ಬಾಹ್ಯಾಕಾಶ ಕೇಂದ್ರವಾದ BASನ ಮೊದಲ ಮಾಡ್ಯೂಲ್ ಅನ್ನು ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಭಾರತವು ಬಾಹ್ಯಾಕಾಶ ವಲಯದ ಮಹತ್ವಾಕಾಂಕ್ಷೆಯ ಯೋಜನೆಗಳ ಭಾಗವಾಗಿ 2035ರ ವೇಳೆಗೆ ಭಾರತೀಯ ಅಂತರಿಕ್ಷ ನಿಲ್ದಾಣದ ಐದು ಮಾಡ್ಯೂಲ್‌ಗಳನ್ನು ಸ್ಥಾಪಿಸಲು ಯೋಜನೆ ಹಾಕಿಕೊಂಡಿದೆ. BAS-01 ಮಾಡ್ಯೂಲ್ 10 ಟನ್ ತೂಕವಿರುತ್ತದೆ ಮತ್ತು ಭೂಮಿಯಿಂದ 450 ಕಿ.ಮೀ. ಎತ್ತರದಲ್ಲಿ ಕಡಿಮೆ ಭೂಮಿಯ ಕಕ್ಷೆಯಲ್ಲಿ ಇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.








