ಬೆಂಗಳೂರು:
ಸಚಿವ ಜಮೀರ್ ಅಹ್ಮದ್ ಆಪ್ತನಿಗೆ ಬೆಳ್ಳಂಬೆಳಗ್ಗೆಯೇ ಐಟಿ ಶಾಕ್ ಕೊಟ್ಟಿದೆ. ಮಾಜಿ ಎಂಎಲ್ಸಿ ಎಂ.ಸಿ ವೇಣುಗೋಪಾಲ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಎರಡು ಇನೋವಾ ಕಾರಲ್ಲಿ ಬಂದ 15 ಅಧಿಕಾರಿಗಳು ಪರಿಶೀಲನೆ ನಡೆಸ್ತಿದ್ದು, ವೇಣುಗೋಪಾಲ್ ಮನೆ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ಸಚಿವ ಜಮೀರ್ ಆಪ್ತ, ಕಾಂಗ್ರೆಸ್ ನಾಯಕ ಮಾಜಿ ಎಂ ಎಲ್ ಸಿ ಎಂ ಸಿ ವೇಣುಗೋಪಾಲ್ ಅವರ ಜೆಪಿ ನಗರದ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಗ್ಗೆ 6:10ರ ಸುಮಾರಿಗೆ ಬಂದಿದ್ದ ಐಟಿ ಅಧಿಕಾರಿಗಳ ತಂಡ ಮನೆಯಲ್ಲಿ ಪರಿಶೀಲನೆಯನ್ನು ಮುಂದುವರಿಸಿದೆ. ಬೆಳಗ್ಗೆಯಿಂದ ಮನೆಯಲ್ಲಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಚುನಾವಣೆಯ ಹಿನ್ನಲೆ ದಾಳಿ ನಡೆದಿರೋ ಶಂಕೆ ವ್ಯಕ್ತವಾಗಿದ್ದು, ಜೊತೆಗೆ ಸಾಕಷ್ಟು ಬಿಸಿನೆಸ್ ಕೂಡ ಎಂಸಿ ವೇಣುಗೋಪಾಲ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತೆರಿಗೆ ವಂಚನೆ ಹಿನ್ನಲೆ ದಾಳಿ ನಡೆಯಿತಾ? ಅಥವಾ ಚುನಾವಣೆ ಹಿನ್ನಲೆ ದಾಳಿ ನಡೆಯಿತಾ ಅನ್ನೋದು ಗೊತ್ತಾಗಬೇಕಿದೆ. ಸದ್ಯ ಮನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.
ರಾಜ್ಯದಲ್ಲಿ ಎರಡನೇ ಹಂತದ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ನಾಯಕರ ದಂಡಯಾತ್ರೆ ಜೋರಾಗಿದೆ. ಇಂದು ರಾಜ್ಯಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಪರ ರಾಹುಲ್ ಮತಯಾಚನೆ ಮಾಡಲಿದ್ದಾರೆ. ಮಧ್ಯಾಹ್ನ 12:25ಕ್ಕೆ ಶಿವಮೊಗ್ಗ ಏರ್ಪೋರ್ಟ್ ಬಂದಿಳಿಯಲಿದ್ದು, ಗೀತಾ ಶೀವರಾಜ್ ಕುಮಾರ್ ಪರ ರಾಹುಲ್ ಮತಯಾಚಿಸಲಿದ್ದಾರೆ. ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಣದೀಪ್ ಸಿಂಗ್ ಸುರ್ಜೆವಾಲ, ನಟ ಶಿವರಾಜ್ ಕುಮಾರ್ ಭಾಗಿಯಾಗಲಿದ್ದಾರೆ.
ಶಿವಮೊಗ್ಗ ಬಳಿಕ ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತಬೇಟೆ ಮಾಡಲಿದ್ದಾರೆ. ವಾಲ್ಕಟ್ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯ್ಕ್ ಪರ ಪ್ರಚಾರ ಮಾಡಲಿದ್ದಾರೆ. ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಹಲವು ಸಚಿವರು ಸಾಥ್ ನೀಡಲಿದ್ದಾರೆ.