ಕೈಗಾರಿಕಾ ವಸಾಹತು ದುಸ್ಥಿತಿ: ರಾಶಿ ರಾಶಿ ಕಸ, ಮದ್ಯದ ಬಾಟಲಿಗಳು
ತುಮಕೂರು:
ಬಿ.ಎಚ್.ರಸ್ತೆಗೆ ಹೊಂದಿಕೊAಡಿರುವ ಕೆ.ಎಸ್.ಎಫ್.ಸಿ. ಆವರಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ರಾತ್ರಿಯಾದರೆ ಸಾಕು ಕುಡುಕರ ಹಾವಳಿ ಶುರುವಾಗುತ್ತದೆ. ದ್ವಿಚಕ್ರ ವಾಹನಗಳು, ಕಾರುಗಳು ಇಲ್ಲಿ ಅಡ್ಡಾಡುತ್ತವೆ. ರಸ್ತೆಯ ಬದಿಯಲ್ಲಿ ಪೇಪರ್ ಹರಡಿಕೊಂಡು ಕುಳಿತುಕೊಳ್ಳುವ ಗುಂಪು ಗಂಟೆಗಟ್ಟಲೆ ಮದ್ಯದ ಅಮಲಿನಲ್ಲಿ ಮುಳುಗಿ ಹೋಗುತ್ತದೆ. ಯಾರಾದರೂ ಪ್ರಶ್ನೆ ಮಾಡಿದರೆ ಅವರನ್ನೇ ಮರುಪ್ರಶ್ನೆ ಹಾಕಿ ಬಾಯಿ ಮುಚ್ಚಿಸುವ ಪುಂಡರು ಇಲ್ಲಿ ಸಿಗುತ್ತಾರೆ.
ಈ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸುಮಾರು 75 ರಿಂದ 80ರವರೆಗೆ ವಿವಿಧ ರೀತಿಯ ಉತ್ಪಾದನಾ ಘಟಕಗಳು, ಗುಡಿ ಕೈಗಾರಿಕೆಗಳು, ಸಣ್ಣಪುಟ್ಟ ಕಾರ್ಖಾನೆಗಳು ಸೇರಿದಂತೆ ತಯಾರಿಕಾ ಉತ್ಪನ್ನದ ವಿವಿಧ ಮಳಿಗೆಗಳು ಇಲ್ಲಿ ಕಂಡುಬರುತ್ತವೆ. ಕರ್ನಾಟಕ ರಾಜ್ಯ ಹಣಕಾಸು ನಿಗಮದ ಕಚೇರಿ ಈ ಕೈಗಾರಿಕಾ ವಸಾಹತು ಆವರಣದಲ್ಲಿದೆ.
ಪಕ್ಕದಲ್ಲೇ ಜಿಲ್ಲಾ ಕೈಗಾರಿಕಾ ಕೇಂದ್ರವಿದೆ. ಹೀಗೆ ಸರ್ಕಾರಿ, ಅರೆ ಸರ್ಕಾರಿ ಕಚೇರಿ ಕಾರ್ಯಾಲಯಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಡೀ ದಿನ ಜನಜಂಗುಳಿಯಿಂದ, ಕೆಲಸ ಕಾರ್ಯಗಳಿಂದ ತುಂಬಿ ಹೋಗುವ ಈ ವಸಾಹತು ಪ್ರದೇಶ ರಾತ್ರಿಯಾದರೆ ಸಾಕು ಕುಡುಕರ ಹಾವಳಿಯಿಂದ ತುಂಬಿ ಹೋಗುತ್ತದೆ.
ಸುಮಾರು 15 ಎಕರೆ ವಿಸ್ತೀರ್ಣದಲ್ಲಿರುವ ಈ ಕೈಗಾರಿಕಾ ವಸಾಹತು ಸ್ಥಾಪನೆಯಾಗಿರುವುದು 1965 ರಲ್ಲಿ. ದಿನೆ ದಿನೆ ನಗರ ಬೆಳವಣಿಗೆಯಾದಂತೆ ಇಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು ಬೆಳವಣಿಗೆ ಹೊಂದಿವೆ. ಕೆಲವು ಹೋಟೆಲ್‌ಗಳು, ಚಹಾ ಅಂಗಡಿಗಳು ತಲೆ ಎತ್ತಿವೆ. ಒಟ್ಟಾರೆ ಸಾವಿರಾರು ಮಂದಿಗೆ ಈ ಕೈಗಾರಿಕಾ ವಸಾಹತು ಪ್ರದೇಶ ಆಶ್ರಯ ನೀಡಿದೆ. ಸಾಕಷ್ಟು ಉದ್ಯಮಿಗಳು ಇಲ್ಲಿ ನೆಲೆ ಕಂಡುಕೊAಡಿದ್ದಾರೆ. ಇವರ ಆಶ್ರಯದಲ್ಲಿ ಸಾಕಷ್ಟು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಪುರುಷರಷ್ಟೇ ಅಲ್ಲ, ಹೆಣ್ಣು ಮಕ್ಕಳೂ ಸಹ ಈ ವಸಾಹತು ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೆಲವು ತಯಾರಿಕಾ ಘಟಕಗಳು ಹಾಗೂ ಗುಡಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ರಾತ್ರಿ 8 ಗಂಟೆಯ ತನಕ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಂಜೆಯ ನಂತರ ಹೆಣ್ಣು ಮಕ್ಕಳು ಇಲ್ಲಿನ ರಸ್ತೆಗಳಲ್ಲಿ ಬರುವಾಗ ಪಡ್ಡೆ ಹುಡುಗರು, ಮದ್ಯವ್ಯಸನಿಗಳು ಈ ಭಾಗದಲ್ಲಿ ಸಂಚರಿಸುತ್ತಾ ಕೀಟಲೆ ಮಾಡುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಇದರಿಂದಾಗಿ ಸಂಜೆಯಾದ ನಂತರ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವ ಹೆಣ್ಣು ಮಕ್ಕಳು ಆತಂಕದಿಂದಲೇ ಹೊರಗೆ ಬರುವ ಪರಿಸ್ಥಿತಿ ಇದೆ.
ಈ ವಸಾಹತು ಪ್ರದೇಶಕ್ಕೆ ಹೊಂದಿಕೊಂಡಂತೆ ಬಿ.ಎಚ್.ರಸ್ತೆಯ ಮಗ್ಗುಲಲ್ಲಿ ರಾತ್ರಿವೇಳೆ ತಿಂಡಿ ತಿನಿಸುಗಳ ಕ್ಯಾಂಟೀನ್‌ಗಳು ಕಾರ್ಯಾರಂಭ ನಡೆಸುತ್ತವೆ. ಇಲ್ಲಿನ ಕ್ಯಾಂಟೀನ್‌ಗಳಲ್ಲಿ ತಿಂಡಿ ಕಟ್ಟಿಸಿಕೊಳ್ಳುವ ಕೆಲವರು ತಮ್ಮ ವಾಹನಗಳ ಮೂಲಕ ವಸಾಹತು ಪ್ರದೇಶದೊಳಗೆ ಆಗಮಿಸಿ ಕುಡಿತ ಆರಂಭಿಸುತ್ತಾರೆ. ಇನ್ನು ಕೆಲವರು ಆನ್‌ಲೈನ್ ಮೂಲಕವೇ ತಮಗೆ ಬೇಕಾದ ಮದ್ಯವನ್ನು ಸರಬರಾಜು ಮಾಡಿಸಿಕೊಳ್ಳುತ್ತಾರೆ.
ಹೀಗಾಗಿ ಸಂಜೆಯಾದ ನಂತರ ರಾತ್ರಿವೇಳೆಯಲ್ಲಿ ಪಾಳೆಯದಲ್ಲಿ ಕೆಲಸ ಮಾಡುವವರಿಗೆ ಇಂತಹ ಉಪಟಳಗಳು ಹೆಚ್ಚು ಕಾಡತೊಡಗಿವೆ.
ಇಲ್ಲಿನ ನೈರ್ಮಲ್ಯವೂ ಅಷ್ಟು ಉತ್ತಮವಾಗಿಲ್ಲ. ಪ್ರದೇಶದೊಳಗಿರುವ ರಸ್ತೆಗಳನ್ನು ಒಮ್ಮೆ ಸುತ್ತಾಡಿ ಬಂದರೆ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತದೆ. ಗಿಡಗಂಟೆಗಳು ಬೆಳೆದು ನಿಂತಿವೆ. ಕೆಲವು ಕಾರ್ಖಾನೆಗಳು ಮುಚ್ಚಿ ಹೋಗಿದ್ದು, ಅವುಗಳ ಕಾಂಪೌAಡ್ ತುಂಬೆಲ್ಲಾ ಗಲೀಜು ಪದಾರ್ಥಗಳು, ಕಸಕಡ್ಡಿಗಳು ಶೇಖರಣೆಯಾಗಿ ಹುಲ್ಲು, ಗಿಡಗಂಟೆಗಳು ಆವರಿಸಿವೆ. ಆ ಭಾಗದಲ್ಲಿ ಸಂಚರಿಸುವವರು ಇಂತಹ ಪ್ರದೇಶಗಳನ್ನೇ ಮಲಮೂತ್ರಕ್ಕೆ ಬಳಸುತ್ತಿದ್ದಾರೆ. ರಸ್ತೆಯ ವಿವಿಧ ಬದಿಗಳಲ್ಲಿ ರಾಶಿಯಾಗುವ ಕಸಕಡ್ಡಿಗೆ ಆಗೊಮ್ಮೆ ಈಗೊಮ್ಮೆ ಬೆಂಕಿ ಇಡಲಾಗುತ್ತದೆ. ಇದೂ ಸಹ ಪರಿಸರ ಅನೈರ್ಮಲ್ಯಕ್ಕೆ ಕಾರಣವಾಗುತ್ತದೆ.
ಬಹಳಷ್ಟು ಜನ ಈ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ತಮ್ಮ ದುಡಿಮೆಯ ಬದುಕು ಕಂಡುಕೊAಡಿದ್ದಾರೆ. ಅವರಿಗೆಲ್ಲ ನೈರ್ಮಲ್ಯದ ವಾತಾವರಣವೂ ಇರಬೇಕು. ಕಸದ ರಾಶಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ರಾತ್ರಿವೇಳೆ ಕುಡುಕರ ಹಾವಳಿ ತಪ್ಪಿಸಲು ಪೊಲೀಸ್ ಬೀಟ್ ಪ್ರದಕ್ಷಿಣೆ ಹಾಕಬೇಕು. ಎಲ್ಲೆಲ್ಲಿ ಕಸಕಡ್ಡಿ, ಗಿಡಗಂಟೆಗಳು ಬೆಳೆದಿವೆಯೋ ಅದನ್ನು ನಿರ್ಮೂಲನೆ ಮಾಡಬೇಕು ಎಂಬುದು ಅಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರ ಒತ್ತಾಯ.
ಅನೈತಿಕ ಚಟುವಟಿಕೆಗಳ ತಾಣ
ಬಿ.ಎಚ್.ರಸ್ತೆಗೆ ಹೊಂದಿಕೊಂಡಂತೆ ಇರುವ ಈ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಸಾಕಷ್ಟು ಉದ್ಯಮಗಳು ತಲೆಎತ್ತಿವೆ. ನೂರಾರು ಜನ ಇಲ್ಲಿ ಬದುಕು ಕಂಡುಕೊAಡಿದ್ದಾರೆ. ಉದ್ಯಮ ಕೇಂದ್ರಗಳಿವೆ. ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳೂ ಇವೆ. ಇಂತಹ ವಿಶಾಲವಾದ ಸ್ಥಳದಲ್ಲಿ ನೈರ್ಮಲ್ಯ ಅಷ್ಟಕಷ್ಟೆ. ರಸ್ತೆಯ ಬಹುಪಾಲು ಕಡೆಗಳಲ್ಲಿ ಕಸದ ರಾಶಿ ಕಂಡುಬರುತ್ತದೆ.
ಇದರ ಜೊತೆಗೆ ಮದ್ಯದ ಬಾಟಲಿಗಳ ರಾಶಿಯಂತೂ ಹೇರಳವಾಗಿ ಸಿಗುತ್ತವೆ. ರಸ್ತೆಯ ಬದಿ ಹಾಗೂ ಪಾಳುಬಿದ್ದ ಕೈಗಾರಿಕೆಗಳ ಆವರಣದಲ್ಲಿ ಬಾಟಲಿಗಳು ಬಿದ್ದು ಉರುಳಾಡುತ್ತಿವೆ. ಅಲ್ಲಿನ ಜನರು ಹೇಳುವ ಪ್ರಕಾರ ಪ್ರಮುಖವಾಗಿ ರಾತ್ರಿವೇಳೆ ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಇದು ತಪ್ಪಬೇಕಾದರೆ ಪೊಲೀಸ್ ಬೀಟ್ ವ್ಯವಸ್ಥೆ ಮಾಡಬೇಕು ಎಂಬುದು ಅಲ್ಲಿನವರ ಆಗ್ರಹ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
