ಬೆಂಗಳೂರು:
ಬೆಂಗಳೂರಿನಲ್ಲಿ ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ಶೋ ವೇಳೆ ಜಯನಗರ ಬಸ್ ಟರ್ಮಿನಲ್ ಬಂದ್ ಮಾಡಿದ್ದರಿಂದ ನೂರಾರು ಪ್ರಯಾಣಿಕರಿಗೆ ತೊಂದರೆಯಾದ ಬಗ್ಗೆ ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ ಬೆಂಗಳೂರು ಸಂಚಾರ ಪೊಲೀಸರಿಗೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಗೆ ದೂರು ನೀಡಿದ್ದು, ಬಸ್ ನಿಲ್ದಾಣ ಬಂದ್ ಮಾಡಿರುವುದು ಕಾನೂನುಬಾಹಿರ ಎಂದು ಹೇಳಿದೆ.
ಬಸ್ ಪ್ರಯಾಣಿಕರ ಹಕ್ಕುಗಳ ವೇದಿಕೆ ಬಿಬಿಪಿವಿ ಮೇ 7 ರಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದು, ಬಿಎಂಟಿಸಿಯಲ್ಲಿ ಪ್ರಯಾಣಿಸುವವರಲ್ಲಿ ಹೆಚ್ಚಾಗಿ ಕಾರ್ಮಿಕರಾಗಿರುತ್ತಾರೆ. ಶ್ರೀಮಂತ ಹಿನ್ನೆಲೆಯಿಂದ ಬಂದವರಲ್ಲ.
ರೋಡ್‌ಶೋಗಾಗಿ ಬಸ್ ನಿಲ್ದಾಣ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಸಾಕಷ್ಟು ಅನಾನುಕೂಲತೆಯನ್ನುಂಟುಮಾಡಿದೆ ಮತ್ತು ಒಂದು ದಿನ ಅಥವಾ ಅರ್ಧ ದಿನದ ವೇತನ/ವ್ಯಾಪಾರ/ಸಂಬಳವನ್ನು ಅವರು ಕಳೆದುಕೊಂಡಿದ್ದಾರೆ. ಹೀಗಾಗಿ ಟರ್ಮಿನಲ್ ಬಂದ್ ಮಾಡಲು ಅನುಮತಿ ನೀಡಿದವರ ವಿರುದ್ಧ ತನಿಖೆ ನಡೆಸಬೇಕು ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಬಿಪಿವಿ ಒತ್ತಾಯಿಸಿದೆ.