ಬೆಂಗಳೂರು:
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳ ಸೃಷ್ಟಿ ವಿಚಾರ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಹಾಗೂ ದಲಿತ ಉಪಮುಖ್ಯಮಂತ್ರಿ ಕುರಿತು ವರಿಷ್ಠರು ತೀರ್ಮಾನ ಮಾಡುತ್ತಾರೆಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ದಲಿತ ಡಿಸಿಎಂ ಇರುವುದು ಪಕ್ಷದ ಹೈಕಮಾಂಡ್‌ಗೆ ಸರಿ ಎಂದು ಅನಿಸಿದರೆ, ಅವರೇ ನೇಮಿಸುತ್ತಾರೆ. ಆಡಳಿತ ಉತ್ತಮವಾಗಿದೆ ಎಂದು ಉನ್ನತಾಧಿಕಾರಿಗಳು ಭಾವಿಸಿದರೆ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಡಿಸಿಎಂ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ನನಗೆ ತಿಳಿದಿಲ್ಲ ಎಂದರು
ದೆಹಲಿಯಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದ್ದು, ಅದರಲ್ಲಿ ಸಿಎಂ ಮತ್ತು ಡಿಸಿಎಂ ಭಾಗವಹಿಸಲಿದ್ದಾರೆ ಎಂದೂ ಇದೇ ವೇಳೆ ತಿಳಿಸಿದರು.
ಮೋದಿ 3.0 ಸಂಪುಟದಲ್ಲಿ ಹಿಂದುಳಿದ ವರ್ಗಗಳ ಸಂಸದರಿಗೆ ಪ್ರಾತಿನಿಧ್ಯ ಸಿಗದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರಿಗೆ (ಬಿಜೆಪಿ) ದಲಿತರು ಅಥವಾ ಹಿಂದುಳಿದ ವರ್ಗಗಳ ಜನರು ಅಗತ್ಯವಿಲ್ಲ ಎಂದು ತೋರುತ್ತಿದೆ. ಈ ಸಮುದಾಯಗಳಿಂದ ಅನೇಕರು ಬಿಜೆಪಿ ಟಿಕೆಟ್ ಪಡೆದು ಗೆಲವು ಸಾಧಿಸಿದ್ದಾರೆ. ಅವರನ್ನೂ ಪರಿಗಣಿಸಬಹುದಿತ್ತು ಎಂದರು.
ಕೇಂದ್ರ ಸಂಪುಟದಲ್ಲಿ ಕರ್ನಾಟಕದ ಐವರು ಸಚಿವರಿದ್ದಾರೆ. ಜಿಎಸ್‌ಟಿ, ಮೇಕೆದಾಟು ಮುಂತಾದ ಹಲವು ಸಮಸ್ಯೆಗಳು ರಾಜ್ಯ ಎದುರಿಸುತ್ತಿವೆ. ಕೇಂದ್ರದ ನೆರವಿನಿಂದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದರು.
