ಗ್ರಾಮಾಂತರ ಚುನಾವಣೆ : ಪಕ್ಷಗಳ ಕಾಳಗಕ್ಕಿಂತ ವ್ಯಕ್ತಿಗಳ ನಡುವಿನ ಕಾಳಗ

ತುಮಕೂರು:

          ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ, ಮುಖಂಡರ ನಡುವಿನ ಸಂಘರ್ಷ ಈ ಕ್ಷಣಕ್ಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತಿದೆ. ಚುನಾವಣೆಯ ದಿನಗಳು ಸಮೀಪಿಸುವುದಕ್ಕೂ ಮುನ್ನವೇ ಈ ಕ್ಷೇತ್ರದಲ್ಲಿ ನಡೆಯುತ್ತಾ ಬಂದ ಆರ್ಭಟಗಳನ್ನು ಗಮನಿಸಿದರೆ ಪರಿಸ್ಥಿತಿ ಎಲ್ಲಿಗೆ ಮುಟ್ಟುವುದೋ ಎಂಬ ಆತಂಕ ಕ್ಷೇತ್ರದ ಹಲವರಲ್ಲಿ ಎದುರಾಗಿತ್ತು.

         ಅಂತಹ ವಾತಾವರಣಗಳೇ ಇಲ್ಲಿ ಸೃಷ್ಟಿಯಾಗುತ್ತಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ವಾತಾವರಣ ತಿಳಿಯಾದಂತೆ ಕಂಡುಬರುತ್ತಿದ್ದು, ಚುನಾವಣೆ ಘೋಷಣೆಯಾದ ನಂತರ ರಾಜಕೀಯ ತಿರುವು ಮತ್ತು ವರಸೆಗಳು ಮತ್ತೆ ಮುನ್ನೆಲೆಗೆ ಬರುವ ಲಕ್ಷಣಗಳು ಕಂಡುಬರುತ್ತಿವೆ.

       ಇಲ್ಲೇನಿದ್ದರೂ ಜೆಡಿಎಸ್ ವರ್ಸಸ್ ಬಿಜೆಪಿ ಎನ್ನುವಂತಹ ಪರಿಸ್ಥಿತಿ. ಇದಕ್ಕೂ ಮಿಗಿಲಾಗಿ ಬಿ.ಸುರೇಶ್‌ಗೌಡ ವರ್ಸಸ್ ಡಿ.ಸಿ.ಗೌರಿಶಂಕರ್ ನಡುವಿನ ಕಾಳಗ ನಿಚ್ಛಳ. ಕ್ಷೇತ್ರ ಮರುವಿಂಗಡಣೆಯಾಗಿ 2008 ರಲ್ಲಿ ಅಸ್ತಿತ್ವಕ್ಕೆ ಬಂದ ತುಮಕೂರು ಗ್ರಾಮಾಂತರ ಕ್ಷೇತ್ರದ ಪ್ರಥಮ ಸಾರಥಿ ಬಿ.ಸುರೇಶ್ ಗೌಡ. ಎರಡು ಬಾರಿ ಶಾಸಕರಾಗಿ 2018ರಲ್ಲಿ ಅಧಿಕಾರ ಕಳೆದುಕೊಂಡರು. ಇದೀಗ ಮತ್ತೆ ಶಾಸಕರಾಗಬೇಕೆಂಬ ಹಂಬಲದಿAದ ಶತಾಯಗತಾಯ ಗೆಲ್ಲಲೆಬೇಕೆಂದು ನಿರ್ಧರಿಸಿದ್ದು, ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.

      ಕೈ ತಪ್ಪಿ ಹೋಗಿರುವ ಕ್ಷೇತ್ರವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ ಸಂಚರಿಸುತ್ತಿದ್ದಾರೆ.
ಕೈಗೆ ಬಂದಿರುವ ಅಧಿಕಾರವನ್ನು ಸುತಾರಾಂ ಬಿಟ್ಟುಕೊಡಲು ತಯಾರಿಲ್ಲದ ಡಿ.ಸಿ.ಗೌರಿಶಂಕರ್ ಮತ್ತೆ ಶಾಸಕರಾಗಲು ಕಸರತ್ತು ನಡೆಸಿದ್ದಾರೆ. ಕ್ಷೇತ್ರದಾದ್ಯಂತ ಸಾಮಾಜಿಕ ಹಾಗೂ ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸುವಂತೆ ನೋಡಿಕೊಳ್ಳುತ್ತಿದ್ದು, ಭರ್ಜರಿ ಜನ ಸೇರುವಂತೆ ಮಾಡುತ್ತಿದ್ದಾರೆ.

      ಪ್ರಚಾರದಲ್ಲಿ ಯಾರಿಗೇನೂ ಕಮ್ಮಿ ಇಲ್ಲ ಎನ್ನುವಂತೆ ಹಾಲಿ ಹಾಗೂ ಮಾಜಿ ಶಾಸಕರಿಬ್ಬರೂ ಕ್ಷೇತ್ರದಾದ್ಯಂತ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಪಕ್ಷದ ಮುಖಂಡರನ್ನು ಆಹ್ವಾನಿಸುತ್ತಿದ್ದಾರೆ. ಡಿ.ಸಿ.ಗೌರಿಶಂಕರ್ ಅಬ್ಬರದ ಪ್ರಚಾರದಲ್ಲಿ ನಿರತರಾಗಿದ್ದರೆ, ಬಿ.ಸುರೇಶ್‌ಗೌಡ ಮತದಾರರನ್ನು ತಲುಪುವ ಆಂತರಿಕ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಬ್ಬರು ಮುಖಂಡರ ಪರವಾಗಿ ಪಕ್ಷದ ವರಿಷ್ಠರು ಒಂದು ಸುತ್ತಿನ ಪ್ರಚಾರ ನಡೆಸಿಯೂ ಹೋಗಿದ್ದಾರೆ.

    ಬಿಜೆಪಿಯಿಂದ ಜನಸಂಕಲ್ಪ ಯಾತ್ರೆ ನಡೆದರೆ, ಜೆಡಿಎಸ್‌ನಿಂದ ಪಂಚರತ್ನ ರಥಯಾತ್ರೆ ಗಮನ ಸೆಳೆದಿದೆ. 2022 ರ ಡಿಸೆಂಬರ್ ತಿಂಗಳಿನಲ್ಲಿ ಆರಂಭವಾದ ಬಿಜೆಪಿ ಜನಸಂಕಲ್ಪ ಯಾತ್ರೆ ಕುಣಿಗಲ್ ಮಾರ್ಗವಾಗಿ ಸಂಚರಿಸಿತು. ತುಮಕೂರು ಗ್ರಾಮಾಂತರದ ನಾಗವಲ್ಲಿ ಸಮೀಪದ ಬಾಣಾವರ ಬಳಿ ಸುರೇಶ್ ಗೌಡ ಅವರ ಪಕ್ಷದ ಕಚೇರಿ ಶಕ್ತಿಸೌಧವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಆ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಬಾರಿ ಸುರೇಶ್‌ಗೌಡ ಅವರು 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿದು ಹೋಗಿದ್ದಾರೆ.

    ಬಿಜೆಪಿಯ ಜನಸಂಕಲ್ಪ ಯಾತ್ರೆಗೆ ಟಾಂಗ್ ಕೊಡುವ ರೀತಿಯಲ್ಲಿ ಡಿ.ಸಿ.ಗೌರಿಶಂಕರ್ ಪಂಚರತ್ನ ರಥಯಾತ್ರೆ ಸಂಘಟಿಸಿದರು. ತುಮಕೂರು ನಗರವನ್ನೂ ಒಳಗೊಂಡAತೆ ಗ್ರಾಮಾಂತರದ ವಿವಿಧ ಭಾಗಗಳಲ್ಲಿ ಪಂಚರತ್ನ ರಥಯಾತ್ರೆಯ ಕಟೌಟ್‌ಗಳು, ಫ್ಲೆಕ್ಸ್ಗಳು ವಿಜೃಂಭಿಸಿದವು. ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಸಂಘಟಿಸಿ ಜನ ಸೇರುವಂತೆ ನೋಡಿಕೊಂಡರು.

   ಇದೇ ಸಂದರ್ಭದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹಲ್ಲೆಯ ಆರೋಪ ಎದುರಾಗಿ ರಾಜಕೀಯ ಜಿದ್ದಾಜಿದ್ದಿ ಕೆಲವು ದಿನಗಳ ಕಾಲ ತೀವ್ರ ಸ್ವರೂಪ ಪಡೆದುಕೊಂಡಿತು. ಜೆಡಿಎಸ್ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಶಾಸಕರ ಬೆಂಬಲಿಗರಿಂದ ಹಲ್ಲೆಯಾಗಿದೆ ಎಂಬ ಆರೋಪ ಮಾಜಿ ಶಾಸಕರಿಂದ ಕೇಳಿಬಂದಿತು. ಬ್ಯಾತ ಗ್ರಾಮದಲ್ಲಿ ಫ್ಲೆಕ್ಸ್ ಕಿತ್ತು ಹಾಕಿದ ಪ್ರಕರಣಕ್ಕೆ ಸಂಬAಧಿಸಿದAತೆ ದೂರು-ಪ್ರತಿದೂರು ದಾಖಲಾದವು.

    ಗ್ರಾಮಾಂತರದಲ್ಲಿ ಅತಿ ಹೆಚ್ಚು ಗಮನ ಸೆಳೆದ ಪ್ರಕರಣವೆಂದರೆ, ಕೊಲೆಯ ಸುಪಾರಿ ವಿಷಯ. ಶಾಸಕರು ನನ್ನ ಕೊಲೆಗೆ ಸುಪಾರಿ ನೀಡಿದ್ದಾರೆಂದು ಆರೋಪಿಸಿದ ಮಾಜಿ ಶಾಸಕರು ಡಿ.ಸಿ.ಗೌರಿಶಂಕರ್, ಅಟಿಕಾಬಾಬು ಸೇರಿದಂತೆ ಮೂವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಸುರೇಶ್‌ಗೌಡ ಅವರಿಂದ ನನಗೆ ಪ್ರಾಣ ಬೆದರಿಕೆ ಇದೆ ಎಂದು ಡಿ.ಸಿ.ಗೌರಿಶಂಕರ್ ಪ್ರತಿ ದೂರು ದಾಖಲಿಸಿದ್ದಾರೆ.

   ಹೀಗೆ ಆರೋಪ-ಪ್ರತ್ಯಾರೋಪಗಳು, ದೂರು-ಪ್ರತಿದೂರುಗಳು ಗ್ರಾಮಾಂತರ ಕ್ಷೇತ್ರದಲ್ಲಿ ಸಾಮಾನ್ಯ ಎಂಬಂತಾಗಿದ್ದು, ಕಾರ್ಯಕರ್ತರ ನಡುವೆ ಕಿತ್ತಾಟ, ಘರ್ಷಣೆಗಳು ನಡೆದುಕೊಂಡೇ ಬಂದಿವೆ. ಚುನಾವಣೆಗಳು ಹತ್ತಿರವಾದಾಗ ಈ ಸಂಘರ್ಷಗಳು ಎಲ್ಲೆ ಮೀರುವ ಆತಂಕವೂ ಎದುರಾಗಿದೆ.

   ಇನ್ನು ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷ ಲೆಕ್ಕಕ್ಕಿಲ್ಲ. ಮಾಜಿ ಶಾಸಕ ಎಚ್.ನಿಂಗಪ್ಪ ಕಾಂಗ್ರೆಸ್‌ನಿAದ ಸ್ಪರ್ಧಿಸುತ್ತಾರೆಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಸೂರ್ಯ ಮುಕುಂದರಾಜ್, ಶ್ರೀನಿವಾಸ್ ಮೊದಲಾದವರು ಕಾಂಗ್ರೆಸ್ ಆಕಾಂಕ್ಷಿಗಳಾಗಿ ಅರ್ಜಿ ಹಾಕಿಕೊಂಡಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ಇರುವಂತಹ ಪೈಪೋಟಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ವಲಯದಲ್ಲಿ ಇಲ್ಲ. ಯಾರೂ ಸಹ ಆಕಾಂಕ್ಷಿಗಳಾಗಿ ಮುಂದೆ ಬರುವ ಲಕ್ಷಣಗಳು ಕಂಡುಬರುತ್ತಿಲ, ಅಷ್ಟರಮಟ್ಟಿಗೆ ಇಲ್ಲಿ ಕಾಂಗ್ರೆಸ್ ಇದೆ.

    ಬಿಜೆಪಿಯಿಂದ ಬಿ.ಸುರೇಶ್ ಗೌಡ, ಜೆಡಿಎಸ್‌ನಿಂದ ಡಿ.ಸಿ.ಗೌರಿಶಂಕರ್ ಸ್ಪರ್ಧೆ ಖಚಿತವಾಗಿದ್ದು, ಕಾಂಗ್ರೆಸ್‌ನಿಂದ ಹೆಚ್.ನಿಂಗಪ್ಪ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆಂದು ಹೇಳಲಾಗುತ್ತಿದೆ. ಏನೇ ಆದರೂ ಇಲ್ಲಿ ಬಿ.ಸುರೇಶ್ ಗೌಡ ಮತ್ತು ಡಿ.ಸಿ.ಗೌರಿಶಂಕರ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆಗಳೇ ಹೆಚ್ಚಿದ್ದು, ಕಾಂಗ್ರೆಸ್ ಯಾರನ್ನು ಅಂತಿಮಗೊಳಿಸಲಿದೆ ಎಂಬ ಕುತೂಹಲ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap