ಬೆಂಗಳೂರು
ಅಂತೂ ಇಂತೂ ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಮಾಡಿಯಾಗಿದೆ. ಇನ್ನೇನು ತಲೆಬಿಸಿ ಇಲ್ಲ ಎಂದೂ ಸುಮ್ಮನೆ ಕೂರುವ ಹಾಗೇ ಇಲ್ಲ. ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಮಾಡಿದ ನಂತರ ಈ ಒಂದು ಕೆಲಸ ಮಾಡುವುದನ್ನು ಮಾತ್ರ ಮರೆಯಬಾರದು.
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವ ಪ್ರಕ್ರಿಯೆ ಅದನ್ನು ವೆರಿಫೈ ಮಾಡಿದ ನಂತರವಷ್ಟೇ ಮುಗಿಯುತ್ತದೆ. ನೀವೇನಾದ್ರೂ, ನಿಗದಿತ ಅವಧಿಯೊಳಗೆ ನಿಮ್ಮ ರಿಟರ್ನ್ ವೆರಿಫೈ ಮಾಡದಿದ್ದರೆ ಅದು ಅಮಾನ್ಯವಾಗುತ್ತೆ. ಅಂದರೆ ನೀವು ರಿಟರ್ನ್ ಫೈಲ್ ಮಾಡೇ ಇಲ್ಲ ಅಂತ ಅರ್ಥ. ಅಂತಹ ಸ್ಥಿತಿಯಲ್ಲಿ, ನೀವು ಮತ್ತೊಮ್ಮೆ ರಿಟರ್ನ್ ಫೈಲ್ ಮಾಡಬೇಕಾಗುತ್ತೆ. ನೀವು ರಿಟರ್ನ್ ಫೈಲ್ ಮಾಡಿದ ನಂತರ ನಿಮ್ಮ ರಿಟರ್ನ್ ಅನ್ನು ವೆರಿಫೈ ಮಾಡಲು ಅಥವಾ ಐಟಿಆರ್-ವಿ ಸಲ್ಲಿಸಲು ನಿಮಗೆ 30 ದಿನಗಳ ಕಾಲಾವಕಾಶ ಇರುತ್ತೆ.
ಈ 30 ದಿನಗಳೊಳಗೆ ನೀವು ನಿಮ್ಮ ರಿಟರ್ನ್ ಅನ್ನು ವೆರಿಫೈ ಮಾಡಲೇಬೇಕು. ನಿಮ್ಮ ರಿಟರ್ನ್‌ನ ವೆರಿಫಿಕೇಶನ್ ಮಾಡಲು ಎರಡು ವಿಧಾನಗಳಿವೆ, ಒಂದು ಆನ್‌ಲೈನ್ ಮೂಲಕ ಇ-ವೆರಿಫೈ ಮಾಡೋದು ಹಾಗೂ ಇನ್ನೊಂದು ಆಫ್‌ಲೈನ್ ಮೂಲಕ ಮಾಡೋದು. ರಿಟರ್ನ್ ಫೈಲ್ ಮಾಡೋವಾಗ ಅದನ್ನು ವೆರಿಫೈ ಮಾಡಲು ಮೂರು ಆಯ್ಕೆಗಳು ಇರುತ್ತವೆ.
ಇ-ವೆರಿಫೈ ಲೆಟರ್, ಹಾಗೂ ಐಟಿಆರ್-ವಿ ಮೂಲಕ ವೆರಿಫೈ ಮಾಡಿ ಅನ್ನೋದೇ ಆ ಮೂರು ಆಯ್ಕೆಗಳಿರುತ್ತವೆ. ರಿಟರ್ನ್ ಅನ್ನು ಇ-ವೆರಿಫೈ ಮಾಡಲು, ತೆರಿಗೆದಾರನೊಬ್ಬನು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್-ಇನ್ ಆಗಬೇಕು. ನಂತರ, ಇ-ಫೈಲಿಂಗ್ ವಿಭಾಗದಲ್ಲಿ ಆದಾಯ ತೆರಿಗೆ ರಿಟರ್ನ್‌ಗೆ ಹೋಗಿ, ಅಲ್ಲಿ ಇ-ವೆರಿಫೈ ರಿಟರ್ನ್ ಆಯ್ಕೆಯನ್ನು ಆರಿಸಿಕೊಳ್ಳಬೇಕು.
ಒಂದು ವೇಳೆ, ನೀವಿನ್ನೂ ವೆರಿಫೈ ಮಾಡಿರದಿದ್ದರೆ, ನಿಮ್ಮ ರಿಟರ್ನ್ ಇ-ವೆರಿಫೈ ವಿಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ನಂತರ, ನೀವು ರಿಟರ್ನ್ ಆಯ್ಕೆಯನ್ನು ಆರಿಸಿಕೊಂಡಲ್ಲಿ, ವೆರಿಫೈ ಮಾಡುವ ಆಯ್ಕೆ ನಿಮಗೆ ಕಾಣಿಸುತ್ತದೆ. ಓಟಿಪಿ, ಡಿಜಿಟಲ್ ಸಹಿ, ಬ್ಯಾಂಕ್ ಖಾತೆ, ನೆಟ್ ಬ್ಯಾಂಕಿಂಗ್, ಮತ್ತು ಡಿಮ್ಯಾಟ್ ಖಾತೆಗಳ ಮೂಲಕ ನೀವು ನಿಮ್ಮ ಆಧಾರ್ ಪರಿಶೀಲನೆ (ವೆರಿಫೈ) ಮಾಡಿಕೊಳ್ಳಬಹುದು. ಆಧಾರ್ ಓಟಿಪಿ ಆರಿಸಿಕೊಂಡಾಗ, ಆಧಾರ್‌ನಲ್ಲಿ ನೋಂದಣಿಯಾಗಿರೋ ನಿಮ್ಮ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತೆ. ಒಂದು ವೇಳೆ, ನಿಮ್ಮ ಮೊಬೈಲ್ ಸಂಖ್ಯೆಯು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ನೋಂದಣಿ ಆಗಿರದಿದ್ದಲ್ಲಿ, ನೀವು ನಿಮ್ಮ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ, ಅಥವಾ ನೆಟ್ ಬ್ಯಾಂಕಿಂಗ್‌ನಿಂದ ವೆರಿಫೈ ಮಾಡಬಹುದು.
ನಿಮ್ಮ ಬ್ಯಾಂಕ್ ಖಾತೆ ಅಥವಾ ಡಿಮ್ಯಾಟ್ ಖಾತೆಯು ಮೊದಲೇ ದೃಢೀಕರಿಸಲ್ಪಟ್ಟಿರಬೇಕು. ಒಂದು ಇಲೆಕ್ಟ್ರಾನಿಕ್ ವೆರಿಫಿಕೇಶನ್ ಕೋಡ್ (ಇ.ವಿ.ಸಿ.) ಉತ್ಪತ್ತಿಯಾದ ನಂತರ ನೀವು ನಿಮ್ಮ ರಿಟರ್ನ್ ವೆರಿಫೈ ಮಾಡಬಹುದು. ಆಫ್‌ಲೈನ್ ವೆರಿಫಿಕೇಶನ್ ಮಾಡಲು, ರಿಟರ್ನ್ ಸಲ್ಲಿಕೆಯಾಗಿರುವುದಕ್ಕೆ ಒಂದು ಸ್ವೀಕೃತಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರ ಮೇಲೆ ನಿಮ್ಮ ಸಹಿ ಮಾಡಿ, ಅದನ್ನು ಬೆಂಗಳೂರಿನಲ್ಲಿರೋ ಕೇಂದ್ರೀಕೃತ ಪರಿಷ್ಕರಣಾ ಕೇಂದ್ರಕ್ಕೆ (ಸಿಪಿಸಿ) ಕಳುಹಿಸಿಕೊಡಬೇಕು.
ಅದನ್ನು ನೀವು ಸಾಮಾನ್ಯ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ 30 ದಿನಗಳೊಳಗೆ ಕಳಿಸಬಹುದು. ಮೂವತ್ತು ದಿನಗಳ ಗಡುವು ಮೀರಿದ ನಂತರ, ನೀವು ಆದಾಯ ತೆರಿಗೆ ಇಲಾಖೆಯ ಜಾಲತಾಣಕ್ಕೆ ಹೋಗಿ, ವೆರಿಫಿಕೇಶನ್ ಮಾಡಲು ವಿಳಂಬವಾಗಿದ್ದಕ್ಕೆ ಕಾರಣ ನೀಡಿ, ಒಂದು ಕ್ಷಮೆಕೋರಿಕೆಯ ಮನವಿಯನ್ನು ಸಲ್ಲಿಸಬೇಕು. ಇಲಾಖೆಯು ನಿಮ್ಮ ಮನವಿಯನ್ನು ಪುರಸ್ಕರಿಸಿದಲ್ಲಿ, ನೀವು ಐಟಿಆರ್ ಅನ್ನು ವೆರಿಫೈ ಮಾಡಬಹುದು. ಒಂದು ವೇಳೆ, ನಿಮ್ಮ ಮನವಿ ತಿರಸ್ಕೃತವಾದಲ್ಲಿ, ನೀವು ರಿಟರ್ನ್ ಫೈಲ್ ಮಾಡಿಲ್ಲ ಎಂದೇ ಭಾವಿಸಲಾಗುವುದು. ಆಗ ನಿಮಗೆ ವಿಳಂಬ ಸಲ್ಲಿಕೆಯ ನಿಯಮಗಳು ಅನ್ವಯವಾಗುತ್ತವೆ.
ಐಟಿಆರ್ ಫೈಲ್ ಮಾಡಿದ್ದರೂ, ಅದನ್ನು ವೆರಿಫೈ ಮಾಡಿಲ್ಲದೆ ಇರುವುದರಿಂದ ನಿಮಗೆ ರೀಫಂಡ್ ಬರದೆ ಇರಬಹುದು. ಹಾಗಾಗಿ ಈ ವೆರಿಫೈ ಪ್ರಕ್ರಿಯೆ ಮುಗಿಸುವುದು ಬಹಳ ಮುಖ್ಯವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
