ದೆಹಲಿ:
ಸುಕೇಶ್ ಚಂದ್ರಶೇಖರ್ ಅವರ ಜತೆ 200 ರೂ. ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪಡೆದ ಉಡುಗೊರೆಗಳು ಅಕ್ರಮ ಮೂಲದಿಂದ ಬಂದಿದ್ದು ಎಂದು ತಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಬುಧವಾರ ದೆಹಲಿ ಹೈಕೋರ್ಟ್‌ನಲ್ಲಿ ನಡೆದ ವಿಚಾರಣಾ ಸಂದರ್ಭದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಅಗರವಾಲ್, ಪ್ರಶಾಂತ್ ಪಾಟೀಲ್ ಮತ್ತು ಶಕ್ತಿ ಪಾಂಡೆ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ವಿರುದ್ಧ ದಾಖಲಾಗಿರುವ ಚಾರ್ಜ್ ಶೀಟ್ ಅನ್ನು ಪ್ರಶ್ನಿಸಿದರು. ಅವರು ಪಡೆದ ಉಡುಗೊರೆಗಳು ಅಕ್ರಮ ಹಣದಿಂದ ಖರೀಸಿದ್ದು ಎಂದು ಅವರಿಗೆ ತಿಳಿದಿರಲಿಲ್ಲ. ಸುಕೇಶ್ ಅದಿತಿ ಸಿಂಗ್ ಅವರಿಂದ ಸುಲಿಗೆ ಮಾಡಿದ ಹಣದಿಂದ ತನಗೆ ಉಡುಗೊರೆ ನೀಡುತ್ತಿದ್ದ ಎಂಬುದು ಜಾಕ್ವೆಲಿನ್ ಗಮನಕ್ಕೆ ಬಂದಿರಲಿಲ್ಲ ಎಂದು ವಕೀಲರ ತಂಡ ಹೇಳಿದೆ.
ಈ ಹಿಂದೆ ಫರ್ನಾಂಡೀಸ್‌ಗೆ ಉಡುಗೊರೆಗಳನ್ನು ಖರೀದಿಸಲು ಸುಕೇಶ್ ಅಪರಾಧದ ಆದಾಯ ಅಥವಾ ಅಕ್ರಮ ಹಣವನ್ನು ಬಳಸಿದ್ದಾರೆ ಎಂದು ED ಆರೋಪಿಸಿತ್ತು. 2022 ರಲ್ಲಿ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ಸುಕೇಶ್, ನಾನು ನೀಡಿದ್ದ ಬೆಲೆಬಾಳುವ ವಸ್ತುಗಳು, ಆಭರಣಗಳು ಮತ್ತು ಬೆಲೆಬಾಳುವ ಉಡುಗೊರೆಗಳನ್ನು ಜಾಕ್ವೆಲಿನ್ ಆನಂದಿಸುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ವಾದ ಮುಂದುವರೆಸಿದ ವಕೀಲರು ಆಕೆಯ ಕಡೆಯಿಂದ ತಪ್ಪಾಗಿದೆ ಹೌದು. ಆಕೆ ಅಷ್ಟು ಬೆಲೆ ಬಾಳುವ ಉಡುಗೊರೆಗಳನ್ನು ಅವನಿಂದ ಪಡೆಯಬಾರದಿತ್ತು ಇದು ಕಾನೂನು ಬಾಹಿರವಲ್ಲ. ಆದರೆ ಆಕೆಗೆ ಅಕ್ರಮ ಹಣದಿಂದ ಉಡುಗೊರೆ ಕೊಟ್ಟಿದ್ದು ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಸುಕೇಶ್ ಬಗ್ಗೆ ಪತ್ರಿಕೆಗಳಲ್ಲಿ ಬಂದ ನಂತರವೂ ಆಕೆ ಅವನ ಜತೆಯಿದ್ದಳು ಎಂದು ಇ.ಡಿ ಮಾಡಿದ್ದ ಆರೋಪಕ್ಕೆ ಉತ್ತರಿಸಿದ ವಕೀಲರು ಪತ್ರಿಕೆಯ ಲೇಖನವನ್ನು ನೋಡಿದ ನಂತರ ಜಾಕ್ವೆಲಿನ್ ಸುಕೇಶ್ ಚಂದ್ರಶೇಖರ್ ಅವರೊಂದಿಗಿನ ಸಂವಹನವನ್ನು ನಿಲ್ಲಿಸಿದ್ದಾರೆ ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ಆಕೆ ಭಾಗಿಯಾಗಿಲ್ಲ ಎಂದು ವಾದಿಸಿದ್ದಾರೆ.
ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.








