ಬೆಳಗಾವಿ ಟಿಕೆಟ್‌ ಜಗದೀಶ್‌ ಶೆಟ್ಟರ್‌ ಪಾಲು ….!

ಬೆಳಗಾವಿ

  ಬಿಜೆಪಿ ಪಕ್ಷ ಅಂತಿಮವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಮೇ 7ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಜಗದೀಶ್ ಶೆಟ್ಟರ್‌. ಧಾರವಾಡ ಮೂಲದ ಶೆಟ್ಟರ್ ಬೆಳಗಾವಿಯಿಂದ ಕಣಕ್ಕಿಳಿಯಲಿದ್ದಾರೆ.

   ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ನೀಡಲು ತೀವ್ರ ವಿರೋಧ ವ್ಯಕ್ತವಾಗಿತ್ತು. #GoBackShettar ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ನಡೆದಿತ್ತು. ಅಂತಿಮವಾಗಿ ಭಾನುವಾರ ಜಗದೀಶ್ ಶೆಟ್ಟರ್ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದೆ. ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್ ಅಭ್ಯರ್ಥಿ.

   ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ 2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಸಿಗಲಿಲ್ಲ ಎಂದು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಹುಬ್ಬಳ್ಳಿ-ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಲು ಕಂಡಿದ್ದ ಅವರು ಮತ್ತೆ ಬಿಜೆಪಿಗೆ ಮರಳಿದ್ದರು. ಈಗ ಬಿಜೆಪಿ ನಾಯಕರು ಅವರಿಗೆ ಲೋಕಸಭೆ ಟಿಕಟ್ ನೀಡಿದ್ದಾರೆ.

   ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಗದೀಶ್ ಶೆಟ್ಟರ್ ಮುಂದೆ ಬೆಳಗಾವಿ ಜನರು ಮೊದಲ ಬೇಡಿಕೆ ಇಟ್ಟಿದ್ದಾರೆ. ಇನ್ನೂ ಚುನಾವಣೆ ಬಾಕಿ ಇದ್ದು, ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.

   ಜಗದೀಶ್ ಶೆಟ್ಟರ್ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿ ಹಬ್ಬಿದ್ದಾಗ ಸಾಮಾಜಿಕ ಜಾಲತಾಣದಲ್ಲಿ ‘ಹುಬ್ಬಳ್ಳಿ ಧಾರವಾಡ ವಂದೇ ಭಾರತ ಎಕ್ಸ್‌ಪ್ರೆಸ್ ಬೆಳಗಾವಿಗೆ ಕೊಡ್ತಾಇದ್ರೆ ವಿರೋಧ್ ಮಾಡಿದ್ರು, ಆದ್ರೆ @JagadishShettarಗೆ ಬೆಳಗಾವಿ ಗೆ ಕೊಡ್ತಾ ಇದ್ರೆ ಸುಮ್ಮನಿದ್ದರೆ ನಾವೂ ವಂದೇ ಭಾರತ ಎಕ್ಸ್‌ಪ್ರೆಸ್ ಬೇಕು ಅಂತೀವಿ, ಆದರೆ ಜಗದೀಶ್ ಶೆಟ್ಟರ್ ಬೇಡ ಅಂತಾ ಇದೀವಿ…ಎಲ್ಲರಿಗೂ ವಂದೇ ಭಾರತ ಬೇಕು ಅದರೆ JS ಬೇಡ…#GoBackShettar’ ಎಂದು ಪೋಸ್ಟ್ ಹಾಕಲಾಗಿತ್ತು.

   ಈಗ ಶೆಟ್ಟರ್ ಅಭ್ಯರ್ಥಿ ಎಂದು ಘೋಷಣೆಯಾಗಿದ್ದು, ‘Congratulations @JagadishShettar for getting @BJP4India’s Ticket for #Belagavi. ಬರ್ತ್ ವಂದೇ ಭಾರತ ತೊಗೊಂಡ ಬರ್ರಿ’ ಎಂದು ಬೇಡಿಕೆ ಇಡಲಾಗಿದೆ.

   ಈ ಪೋಸ್ಟ್ ಮೂಲಕ ಕೆಎಸ್ಆರ್ ಬೆಂಗಳೂರು-ಧಾರವಾಡ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಅನುಮತಿ ಸಿಕ್ಕಿದೆ. ಆದಷ್ಟು ಬೇಗ ರೈಲು ಸೇವೆ ಆರಂಭಿಸುವಂತೆ ಒತ್ತಾಯಿಸಲಾಗಿದೆ.

   ಭಾರತೀಯ ರೈಲ್ವೆ ಪ್ರಯಾಣಿಕರ, ಜನಪ್ರತಿನಿಧಿಗಳ ಬೇಡಿಕೆಯಂತೆ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ಕೊಟ್ಟಿದೆ.

   ಈ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವೂ 2023ರ ನವೆಂಬರ್‌ನಲ್ಲಿ ನಡೆದು, ಯಶಸ್ವಿಯಾಗಿದೆ. ಆದರೆ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚಾರ ಇನ್ನೂ ಸಹ ಆರಂಭವಾಗಿಲ್ಲ. ಆದ್ದರಿಂದ ರೈಲಿನ ವಾಣಿಜ್ಯ ಸಂಚಾರ ಆರಂಭಿಸಿ ಎಂದು ಜನರು ಬೇಡಿಕೆ ಇಟ್ಟಿದ್ದಾರೆ.

   ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿ ಅಷ್ಟೇ ವೇಗದಲ್ಲಿ ಶೆಟ್ಟರ್ ಬಿಜೆಪಿಗೆ ವಾಪಸ್ ಆಗಲು ಬೆಳಗಾವಿ ಟಿಕೆಟ್‌ ಭರವಸೆಯೇ ಕಾರಣ ಎಂದು ಅಂದಾಜಿಸಲಾಗಿದೆ. ಬೆಳಗಾವಿಯ ಹಾಲಿ ಸಂಸದರು ಮಂಗಲ ಸುರೇಶ್ ಅಂಗಡಿ. ಆದರೆ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು.

   ಕಳೆದ ತಿಂಗಳು ಬೆಳಗಾವಿಗೆ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಭೇಟಿ ನೀಡಿದಾಗ ದಿ. ಸುರೇಶ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿದ್ದರು. ಆಗಲೂ ಮಂಗಲ ಅಂಗಡಿ ತಾವು ಕಣಕ್ಕಿಳಿಯಲ್ಲ. ಪುತ್ರಿ ಶ್ರದ್ಧಾ ಅಂಗಡಿಗೆ ಟಿಕೆಟ್ ಕೊಡಿ ಎಂದು ಬೇಡಿಕೆ ಇಟ್ಟಿದ್ದರು.

   ಶ್ರದ್ಧಾ ಅಂಗಡಿ ಜಗದೀಶ್ ಶೆಟ್ಟರ್ ಸೊಸೆ. ಇದೇ ನಂಟನ್ನು ಉಪಯೋಗಿಸಿಕೊಂಡು ಜಗದೀಶ್ ಶೆಟ್ಟರ್ ಧಾರವಾಡ ಬಿಟ್ಟು, ಬೆಳಗಾವಿಗೆ ಹೋಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

 

Recent Articles

spot_img

Related Stories

Share via
Copy link
Powered by Social Snap