ಅಧಿಕಾರಕ್ಕೆ ಬಂದ ಟಿಡಿಪಿಗೆ ಷಾಕ್‌ ನೀಡಿದ ಜಗನ್‌ ಬಂಗಲೆ : ಕಾರಣ ಏನು ಗೊತ್ತಾ…?

ಹೈದರಾಬಾದ್:
 
    ಆಂಧ್ರಪ್ರದೇಶದಲ್ಲಿ ಟಿಡಿಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೇ ಈ ಹಿಂದಿನ ಜಗನ್ ರೆಡ್ಡಿ ಆಡಳಿತದ ಒಂದೊಂದೇ ಹುಳುಕುಗಳನ್ನು ಹೊರತೆಗೆಯುತ್ತಿದೆ. ಋಷಿಕೊಂಡ ಬೆಟ್ಟದಲ್ಲಿ 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಐಷಾರಾಮಿ ಬಂಗಲೆ ನೋಡಿ ಹಾಲಿ ಸರ್ಕಾರ ಬೆಚ್ಚಿಬಿದ್ದಿದೆ.
    ಸರ್ಕಾರೀ ದುಡ್ಡಿನಲ್ಲಿ ಅರಮನೆಯನ್ನೂ ಮೀರಿಸುವಂತಹ ಐಷಾರಾಮಿ ಬಂಗಲೆ ಕಟ್ಟಿಸಲಾಗಿದೆ. ಅದರಲ್ಲೂ ರಾಜ್ಯ ಆರ್ಥಿಕ ಸಂಕಷ್ಟದಲ್ಲಿರುವಾಗ ಇಂತಹದ್ದೊಂದು ವಿಲಾಸೀ ಬಂಗಲೆ ನಿರ್ಮಿಸುವ ಔಚಿತ್ಯವೇನಿತ್ತು ಎಂದು ಟಿಡಿಪಿ ಪ್ರಶ್ನಿಸಿದೆ. ಇತ್ತೀಚೆಗಷ್ಟೇ ನಡೆದಿದ್ದ ವಿಧಾಸಭೆ ಚುನಾವಣೆಯಲ್ಲಿ ಜಗನ್ ರೆಡ್ಡಿ ಪಕ್ಷವನ್ನು ಸೋಲಿಸಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಅಧಿಕಾರಕ್ಕೇರಿತ್ತು.

    ಋಷಿಕೊಂಡ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಅರಮನೆಯಂತಹ ಬಂಗಲೆ ಹೊರಗಿನವರಿಗೆ ಕಾಣದಂತೆ ಎತ್ತರದ ಕಂಪೌಂಡ್ ನಿರ್ಮಿಸಲಾಗಿತ್ತು ಎಂದೂ ಆರೋಪಿಸಲಾಗಿದೆ. ಜಗನ್ ರೆಡ್ಡಿ ವಿಲಾಸೀ ಜೀವನಕ್ಕಾಗಿ ಸರ್ಕಾರೀ ದುಡ್ಡನ್ನು ನೀರಿನಂತೆ ಖರ್ಚು ಮಾಡಿದ್ದಾರೆ.

   ಈ ಬಂಗಲೆಯಲ್ಲಿ ಮುಖ್ಯಮಂತ್ರಿಗಳ ಬೆಡ್ ರೂಂನಲ್ಲಿ ಒಂದು ಬೃಹತ್ ಮಸಾಜ್ ಟೇಬಲ್ ಕೂಡಾ ನಿರ್ಮಿಸಲಾಗಿದೆ. ಒಂದು ಕಮೋಡ್ ಬೆಲೆಯೇ 10-12 ಲಕ್ಷ ರೂ.ಗಳಷ್ಟಿವೆ. ದುಬಾರಿ ಬೆಲೆಯ ಬಾತ್ ಟಬ್, ಫರ್ನಿಚರ್ ಗಳನ್ನು ಇಲ್ಲಿ ಇರಿಸಲಾಗಿದೆ. ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿಗಳಿಗೆ ಇಂತಹ ದೌಲತ್ತಿನ ಅಗತ್ಯವಿತ್ತೇ ಎಂದು ಟಿಡಿಪಿ ಆಕ್ರೋಶ ವ್ಯಕ್ತಪಡಿಸಿದೆ.

    ಈ ಬಂಗಲೆಯ ವಿಚಾರ ಹೊರ ಬರುತ್ತಿದ್ದಂತೇ ಪ್ರತಿಕ್ರಿಯಿಸಿರುವ ಜಗನ್ ಅವರ ವೈಎಸ್ ಆರ್ ಪಕ್ಷ ಇದು ಕೇವಲ ಜಗನ್ ಗಾಗಿ ನಿರ್ಮಿಸಿದ್ದಲ್ಲ. ಯಾವುದೇ ಮುಖ್ಯಮಂತ್ರಿಗಳೂ ಸರ್ಕಾರೀ ಕೆಲಸಕ್ಕೆ ಬಳಸಿಕೊಳ್ಳಬಹುದು ಎಂದಿದೆ. ಆದರೆ ಏನೇ ಇದ್ದರೂ ಇಷ್ಟೊಂದು ಖರ್ಚು ಮಾಡುವ ಅಗತ್ಯವೇನಿತ್ತು ಎಂಬುದು ಟಿಡಿಪಿ ಆರೋಪ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link