ವ್ಯಾಪಾರ- ರಾಜತಾಂತ್ರಿಕತೆ ಬೇರೆ ಬೇರೆ :ಜೈಶಂಕರ್‌

ವಾಷಿಂಗ್ಟನ್‌: 

    ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪದೇ ಪದೇ ಭಾರತ ಹಾಗೂ ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ತಾನೇ ಕಾರಣ ಎಂದು ಹೇಳುತ್ತಿದ್ದಾರೆ. ಇದೀಗ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಈ ಹೇಳಿಕೆಯನ್ನು ಅಲ್ಲಗೆಳೆದಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿರುವ ವಿದೇಶಾಂಗ ಸಚಿವ (ಇಎಎಂ) ಎಸ್ ಜೈಶಂಕರ್, ಆಪರೇಷನ್ ಸಿಂದೂರ್ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ಸಚಿವ ತಿರಸ್ಕರಿಸಿದರು.

   ವ್ಯಾಪಾರ ಮಾತುಕತೆ ಮತ್ತು ಕದನ ವಿರಾಮ ಮಾತುಕತೆಗಳ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಜೈ ಶಂಕರ್‌ ಹೇಳಿದ್ದಾರೆ. ಮೇ 9 ರ ರಾತ್ರಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪ್ರಧಾನಿ ಮೋದಿಯವರೊಂದಿಗೆ ಮಾತನಾಡುತ್ತಾ, ಪಾಕಿಸ್ತಾನ ಭಾರತದ ಮೇಲೆ ಭಾರಿ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಹೇಳಿದ್ದರು. ಆಗ ಆ ಕೋಣೆಯಲ್ಲಿ ನಾನೂ ಇದ್ದೆ. ಆ ರಾತ್ರಿ ಪಾಕಿಸ್ತಾನ ದೊಡ್ಡ ಪ್ರಮಾಣದ ದಾಳಿ ನಡೆಸಿತು , ಅದಕ್ಕೆ ಭಾರತ ತಕ್ಷಣವೇ ಪ್ರತೀಕಾರ ತೀರಿಸಿಕೊಂಡಿತು ಎಂದು ಜೈಶಂಕರ್ ಬಹಿರಂಗಪಡಿಸಿದರು. 

   ಮರುದಿನ ಬೆಳಿಗ್ಗೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರನ್ನು ಸಂಪರ್ಕಿಸಿ ಪಾಕಿಸ್ತಾನ ಮಾತುಕತೆಗೆ ಸಿದ್ಧವಾಗಿದೆ ಎಂದು ಹೇಳಿದರು. ಆ ದಿನದ ನಂತರ, ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಮೇಜರ್ ಜನರಲ್ ಕಾಶಿಫ್ ಅಬ್ದುಲ್ಲಾ ಅವರು ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರನ್ನು ನೇರವಾಗಿ ಸಂಪರ್ಕಿಸಿ ಕದನ ವಿರಾಮಕ್ಕೆ ವಿನಂತಿಸಿದರು” ಎಂದು ಜೈಶಂಕರ್ ಹೇಳಿದರು.

   ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳನ್ನು ಭಾರತ ಆಪರೇಷನ್ ಸಿಂದೂರ್‌ ಮೂಲಕ ನಾಶಪಡಿಸಿತ್ತು. ಕದನ ವಿರಾಮವನ್ನು ಘೋಷಿಸಲು ತಾನೇ ಕಾರಣ ಎಂದು ಟ್ರಂಪ್‌ ಹಲವು ಬಾರಿ ಹೇಳಿದ್ದಾರೆ. ಈ ಹೇಳಿಕೆಯನ್ನು ತಿರಸ್ಕರಿಸಿದ ಜೈಶಂಕರ್, ಘಟನೆಗಳು ಆ ರೀತಿ ನಡೆಯಲಿಲ್ಲ ಮತ್ತು ರಾಜತಾಂತ್ರಿಕತೆ ಮತ್ತು ವ್ಯಾಪಾರ ಮಾತುಕತೆಗಳು ಸಂಪೂರ್ಣವಾಗಿ ಪ್ರತ್ಯೇಕವಾಗಿವೆ ಎಂದು ಹೇಳಿದ್ದಾರೆ.

Recent Articles

spot_img

Related Stories

Share via
Copy link