ಬೆಂಗಳೂರು
ಬೆಂಗಳೂರಿನ ಹೆಗ್ಡೆ ನಗರ ಪ್ರದೇಶದಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಗುಂಪೊಂದು ಭಾನುವಾರ ಸಂಜೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ‘‘ಜೈ ಶ್ರೀರಾಂ ಎಂಬ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಂತ್ರಸ್ತ ಚಾಲಕ ಆರೋಪಿಸಿದ್ದಾರೆ. ಆದರೆ, ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಬಗ್ಗೆ ಉಲ್ಲೇಖಿಸಿಲ್ಲ ಎನ್ನಲಾಗಿದೆ. ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
‘‘ಜೈ ಶ್ರೀ ರಾಮ್’’ ಎಂಬ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ಹಿಂದೂಗಳ ಗುಂಪು ಹಲ್ಲೆ ಮಾಡಿದೆ ಎಂದು ಆಟೋ ಚಾಲಕ ವಾಸೀಂ ಆರೋಪಿಸಿದ್ದಾರೆ. ಹಲ್ಲೆಕೋರರು ಮದ್ಯಪಾನದ ಅಮಲಿನಲ್ಲಿದ್ದರು. ‘‘ಜೈ ಶ್ರೀರಾಂ’’ ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದರು. ಒಪ್ಪದಿದ್ದಾಗ ಹಲ್ಲೆ ಮಾಡಿದರು ಎಂದು ಆಟೋ ಚಾಲಕ ಆರೋಪಿಸಿದ್ದಾರೆ.
ಎಜೆಬಿಜೆ ಲೇಔಟ್ ಪಕ್ಕದಲ್ಲಿರುವ ತೆರೆದ ಮೈದಾನದ ಬಳಿ ಭಾನುವಾರ ಸಂಜೆ 4:30 ರಿಂದ 6:30 ರ ನಡುವೆ ಈ ಘಟನೆ ನಡೆದಿದೆ. ಸ್ನೇಹಿತ ಜಮೀರ್ ಜೊತೆ ಆ ಪ್ರದೇಶಕ್ಕೆ ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ವಾಸೀಂ ಹೇಳಿದ್ದಾರೆ. ಆಗ ಆರರಿಂದ ಎಂಟು ಜನರ ಗುಂಪು ತಮ್ನ್ನು ನಿಂದಿಸಲು ಪ್ರಾರಂಭಿಸಿದೆ. ಅಲ್ಲದೆ ‘‘ಜೈ ಶ್ರೀರಾಂ’ ಘೋಷಣೆ ಕೂಗಬೇಕೆಂದು ಒತ್ತಾಯಿಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಈ ಸಂದರ್ಭ ಜಮೀರ್ ಪರಾರಿಯಾಗುವಲ್ಲಿ ಯಶಸ್ವಿಯಾದರೂ, ತಮ್ಮ ಮೇಲೆ ಗುಂಪು ಥಳಿಸಿದೆ. ಇದರಿಂದಾಗಿ ಗಾಯಗೊಂಡಿದ್ದೇನೆ ಎಂದು ವಾಸೀಂ ಹೇಳಿದ್ದಾರೆ.








