ಕಲಬುರಗಿ:
ಜೈನ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಮುಸ್ಲಿಂ ಸಮುದಾಯದ ಯುವಕನ ಜೊತೆ ನಾಪತ್ತೆಯಾಗಿದ್ದು, ಇದು ಲವ್ ಜಿಹಾದ್ ಅಂತ ಆಕೆಯ ಹೆತ್ತವರು ದೂರು ನೀಡಿದ್ದಾರೆ. ಕಲಬುರಗಿಯಲ್ಲಿ ಈ ಘಟನೆ ನಡೆದಿದೆ. ಬಿಎಸ್ಸಿ ಪದವಿ ಓದುತ್ತಿರುವ ಜೈನ ಯುವತಿ, ಡ್ರೈವರ್ ವೃತ್ತಿ ಮಾಡುತ್ತಿದ್ದ ಮುಸ್ಲಿಂ ಯುವಕನ ಜೊತೆ ನಾಪತ್ತೆಯಾಗಿದ್ದಾಳೆ. ಇದು ಲವ್ ಜಿಹಾದ್ ಅಂತ ದೂರು ಕೊಟ್ಟರೂ, ಪೊಲೀಸರು ಮಿಸ್ಸಿಂಗ್ ಕೇಸ್ ಅಂತ ದಾಖಲಿಸಿಕೊಂಡಿದ್ದಾರೆ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮುಸ್ಲಿಂ ಯುವಕ ಮಶಾಕ್ ಎಂಬಾತನ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೊಬ್ಬುರ ಗ್ರಾಮದ ಯುವತಿಯನ್ನು ಅದೇ ಗ್ರಾಮದ ಡ್ರೈವರ್ ಮಶಾಕ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ ಪ್ರೀತಿ- ಪ್ರೇಮದ ಹೆಸರಲ್ಲಿ ಯುವತಿಯನ್ನು ಮಶಾಕ್ ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಜುಲೈ 29ರಂದು ಯುವತಿಯನ್ನು ಕರೆದುಕೊಂಡು ಮಶಾಕ್ ಪರಾರಿಯಾಗಿದ್ದಾನೆ. ಯುವತಿಯ ಕಾಲೇಜಿನ ಬಳಿಯಿಂದಲೇ ಕರೆದೊಯ್ದ ಮಶಾಕ್, ಬಳಿಕ ನಾಪತ್ತೆಯಾಗಿದ್ದಾನೆ. ಇದಾಗಿ ಎಂಟು ದಿನ ಕಳೆದರೂ ಯುವತಿಯ ಪತ್ತೆ ಇಲ್ಲ. ಹೀಗಾಗಿ ಆಕೆಯ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಪ್ರೀತಿ ಪ್ರೇಮ ಅಲ್ಲ, ಲವ್ ಜಿಹಾದ್ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರೂ ಕೂಡ ಲವ್ ಜಿಹಾದ್ ಆರೋಪ ಮಾಡಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗುಲ್ಬರ್ಗ ವಿವಿ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿದೆ. ಲವ್ ಜಿಹಾದ್ ನಡೆದರೂ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ಹಿಂದೂ ಪರ ಸಂಘಟನೆ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
