ತೆಲಂಗಾಣ ಜಾತಿ ಗಣತಿ ದೇಶದ ಜಾತಿಗಣತಿಗೆ ನೀಲನಕ್ಷೆ- ಜೈರಾಮ್ ರಮೇಶ್

ನವದೆಹಲಿ:

    ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಬಹುನಿರೀಕ್ಷಿತ ಜಾತಿ ಆಧಾರಿತ ಗಣತಿ ಕಾರ್ಯವನ್ನು ಆರಂಭಿಸಿದ್ದು,ಇದು ಐತಿಹಾಸಿಕ ಮತ್ತು ಕ್ರಾಂತಿಕಾರಿ’ ಕ್ಷಣವಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.

   ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಮುಂದಿನ ಕೆಲವು ವಾರಗಳಲ್ಲಿ 80,000 ಗಣತಿದಾರರು ಮನೆ ಮನೆಗಳಿಗೆ ತೆರಳಿ ಜಾತಿ ಗಣತಿ ಕಾರ್ಯ ಮಾಡಲಿದ್ದಾರೆ. ಅವರು 33 ಜಿಲ್ಲೆಗಳಲ್ಲಿ 1.17 ಕೋಟಿ ಕುಟುಂಬಗಳನ್ನು ಗಣತಿ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

   1931 ರಿಂದ ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಜಾತಿ ಆಧಾರಿತ ಗಣತಿ ಕಾರ್ಯ ನೆಡಸಲಾಗುತ್ತಿದೆ. ಇದು ಐತಿಹಾಸಿಕ, ಕ್ರಾಂತಿಕಾರಿ ಕ್ಷಣವಾಗಿದ್ದು,ತೆಲಂಗಾಣ ಹೋರಾಟದ ಆಕಾಂಕ್ಷೆಗಳ ಸಾಕಾರಗೊಳಿಸುವಿಕೆ ಮತ್ತು ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪ್ರಮುಖ ಆದರ್ಶ ಈಡೇರಿಸುವುದಾಗಿದೆ. ಈ ವಾರದ ಆರಂಭದಲ್ಲಿ ಹೈದರಾಬಾದ್‌ನಲ್ಲಿ ರಾಹುಲ್ ಗಾಂಧಿ ಹೇಳಿದಂತೆ ಇದು ವಿರೋಧ ಪಕ್ಷಗಳ INDIA ಮೈತ್ರಿಕೂಟ ಸರ್ಕಾರ ನಡೆಸಲಿರುವ ಜಾತಿ ಗಣತಿಯ ನೀಲನಕ್ಷೆಯಾಗಿದೆ ಎಂದು ಅವರು ಹೇಳಿದ್ದಾರೆ. 

   ಈ ಜಾತಿಗಣತಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗಿರುವ ಶೇ.50 ರಷ್ಟು ಮೀಸಲಾತಿಯ ಸುಪ್ರೀಂಕೋರ್ಟ್ ನಿರ್ಬಂಧವನ್ನು ರದ್ದುಗೊಳಿಸುವ ಕಾಂಗ್ರೆಸ್ ಗೆ ದೂರ ದೃಷ್ಟಿಗೆ ಕೇಂದ್ರವಾಗಿದೆ. ನಮ್ಮ ಸಂವಿಧಾನದಲ್ಲಿ ದೇಶದ ನಿರ್ಮಾತೃಗಳು ಕಲ್ಪಿಸಿದಂತೆ ದೇಶದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯದ ಕಲ್ಪನೆಗೆ ನಾವು ಬದ್ಧರಾಗಿದ್ದೇವೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.