ನವದೆಹಲಿ:
ದೇಶಾದ್ಯಂತ ನಡೆದಿರುವ ಹಲವಾರು ಭಯೋತ್ಪಾದಕ ದಾಳಿಯ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಜೈಶ್-ಎ-ಮೊಹಮ್ಮದ್‌ನ ಮಹಿಳಾ ವಿಭಾಗ ಬಲಗೊಳ್ಳುತ್ತಿದೆ. ಗುಪ್ತಚರ ಮೂಲಗಳ ಮಾಹಿತಿಯ ಪ್ರಕಾರ ಜೈಶ್ ನ ಮಹಿಳಾ ವಿಭಾಗವಾದ ಜಮಾತ್ ಉಲ್ ಮೊಮಿನಾತ್‌ಗೆ ಅಕ್ಟೋಬರ್ 8ರಿಂದ ನೇಮಕಾತಿ ಅಭಿಯಾನ ನಡೆಸಲಾಗುತ್ತಿದೆ. ಇದರಲ್ಲಿ ಈಗಾಗಲೇ 5,000ಕ್ಕೂ ಹೆಚ್ಚು ಮಹಿಳೆಯರು ಸೇರಿಕೊಂಡಿದ್ದಾರೆ. ಇವರಿಗೆ 500 ರೂ. ಶುಲ್ಕ ವಿಧಿಸಲಾಗಿದ್ದು, ಆನ್‌ಲೈನ್ ಮೂಲಕ ತರಬೇತಿಯನ್ನೂ ನೀಡಲಾಗುತ್ತಿದೆ.
ಜೈಶ್ ಪ್ರಧಾನ ಕಚೇರಿಯಾದ ಮರ್ಕಜ್ ಉಸ್ಮಾನ್-ಒ-ಅಲಿಯಲ್ಲಿ ಪ್ರಾರಂಭಿಸಲಾಗಿರುವ ಜೈಶ್-ಎ-ಮೊಹಮ್ಮದ್‌ನ ಹೊಸ ಮಹಿಳಾ ವಿಭಾಗವಾದ ಜಮಾತ್ ಉಲ್ ಮೊಮಿನಾತ್‌ನಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿದ್ದು, ಅವರಿಗೆ ಮೂಲಭೂತವಾದಿಯಾಗಲು ತರಬೇತಿ ನೀಡಲಾಗುತ್ತಿದೆ ಎನ್ನಲಾಗಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈಶ್ ಮುಖ್ಯಸ್ಥ ಮಸೂದ್ ಅಜರ್, ಜೈಶ್ ನ ಮಹಿಳಾ ವಿಭಾಗದಲ್ಲಿ ನೇಮಕಾತಿ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಜಿಲ್ಲಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದ್ದಾನೆ.ನೋಂದಣಿ ಆರಂಭವಾದ ಕೆಲವೇ ವಾರಗಳಲ್ಲಿ 5,000 ಕ್ಕೂ ಹೆಚ್ಚು ಮಹಿಳೆಯರು ಸೇರ್ಪಡೆಯಾಗಿದ್ದಾರೆ. ಇದು ದೇವರ ಕೃಪೆ. ಈಗಾಗಲೇ ನೇಮಕಗೊಂಡ ಅನೇಕ ಸಹೋದರಿಯರ ಮನಸ್ಥಿತಿ ಬದಲಾಗಿದ್ದು, ಅವರು ತಮ್ಮ ಜೀವನದ ಗುರಿಯನ್ನು ಅರಿತುಕೊಂಡಿದ್ದಾರೆ. ಶೀಘ್ರದಲ್ಲೇ ಜಿಲ್ಲಾ ಘಟಕಗಳನ್ನು ರಚಿಸಲಾಗುತ್ತದೆ, ಪ್ರತಿ ಜಿಲ್ಲೆಗೆ ವ್ಯವಸ್ಥಾಪಕರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾನೆ.
ಮಾಹಿತಿಯ ಪ್ರಕಾರ ಜಮಾತ್ ಉಲ್ ಮೊಮಿನಾತ್‌ನಲ್ಲಿ ಪಾಕಿಸ್ತಾನದ ಬಹಾವಲ್ಪುರ್, ಮುಲ್ತಾನ್, ಸಿಯಾಲ್ಕೋಟ್, ಕರಾಚಿ, ಮುಜಫರಾಬಾದ್ ಮತ್ತು ಕೋಟ್ಲಿಯಿಂದ ಹೆಚ್ಚಿನ ಮಹಿಳೆಯರು ಸೇರ್ಪಡೆಯಾಗಿದ್ದಾರೆ. ಮಸೂದ್ ಅಜರ್‌ನ ಸಹೋದರಿ ಸಾದಿಯಾ ಇದನ್ನು ಮುನ್ನಡೆಸುತ್ತಿದ್ದಾಳೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್ ನಲ್ಲಿ ಸಾದಿಯಾಳ ಪತಿ ಯೂಸುಫ್ ಅಜರ್ ಸಾವನ್ನಪ್ಪಿದ್ದನು.
ಜಮಾತ್ ಉಲ್ ಮೊಮಿನಾತ್‌ಗೆ ಸೇರಿರುವ ಮಹಿಳೆಯರಿಗೆ ಆನ್‌ಲೈನ್ ಮೂಲಕ 40 ನಿಮಿಷಗಳ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಮಹಿಳೆಯರನ್ನು ಐಸಿಸ್, ಹಮಾಸ್ ಮತ್ತು ಎಲ್‌ಟಿಟಿಇಯಂತಹ ಫಿದಾಯೀನ್ ದಾಳಿಗಳನ್ನು ನಡೆಸಲು ಭಯೋತ್ಪಾದಕ ದಳಗಳನ್ನು ರಚಿಸುವುದು ಇದರ ಉದ್ದೇಶವಾಗಿದೆ ಎನ್ನಲಾಗಿದೆ.
ನವೆಂಬರ್ ತಿಂಗಳ ಆರಂಭದಲ್ಲಿ ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಪೋಟದ ಬಳಿಕ ಜೈಶ್ ನ ಮಹಿಳಾ ವಿಭಾಗ ಜಮಾತ್ ಉಲ್ ಮೊಮಿನಾತ್ ಹೆಸರು ವಿಶ್ವದ ಗಮನ ಸೆಳೆದಿದೆ. ಯಾಕೆಂದರೆ ಈ ಪ್ರಕರಣದಲ್ಲಿ ಬಂಧಿತಳಾಗಿರುವ ಡಾ. ಶಾಹೀನ್ ಸಯೀದ್ ಜೈಶ್ ಭಯೋತ್ಪಾದಕ ವಿಭಾಗದೊಂದಿಗೆ ಸಂಬಂಧ ಹೊಂದಿದ್ದಳು ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.








