ನಗರ ಪಾಲಿಕೆಯಿಂದ ಅಥವಾ ಸ್ಥಳೀಯ ಸಂಸ್ಥೆಗಳಿಂದ ಪ್ರತಿ ಮನೆಗೆ ನೀರು ಸರಬರಾಜು ಮಾಡಲಾಗುತ್ತದೆ. ವಾರಕ್ಕೆ ಇಂತಿಷ್ಟು ದಿನ ಎನ್ನುವ ದಿನಗಳ ಲೆಕ್ಕಾಚಾರದಲ್ಲಿ ನೀರು ಬಿಡಲಾಗುತ್ತದೆ. ನೀರಿನ ಲಭ್ಯತೆ ನೋಡಿಕೊಂಡು ನೀರು ಹರಿಸಲಾಗುತ್ತದೆ. ಪೈಪ್ ಮೂಲಕ ಪ್ರತಿ ಮನೆಗೂ ಸಂಪರ್ಕ ಕಲ್ಪಿಸಲಾಗಿದ್ದು, ಮನೆಗಳ ಸಂಪಿಗೆ ನೀರು ಹರಿಯುತ್ತದೆ. ನೀರು ಬಿಟ್ಟಾಗ ಸಂಪೂರ್ಣ ತುಂಬಿಸಿಕೊಳ್ಳುವತ್ತ ಎಲ್ಲರೂ ಆಸಕ್ತಿ ವಹಿಸುತ್ತಾರೆ.
ಸಂಪಿನಿಂದ ಮನೆಯ ಮೇಲ್ಭಾಗದಲ್ಲಿ ಅಳವಡಿಸಿಕೊಂಡಿರುವ ಟ್ಯಾಂಕ್‍ಗೆ ನೀರನ್ನು ಲಿಫ್ಟ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಹೀಗೆ ಮೋಟಾರ್ ಆನ್ ಮಾಡಿ ನೀರು ಮೇಲಕ್ಕೆತ್ತುವಾಗ ಟ್ಯಾಂಕ್ ತುಂಬುವುದನ್ನು ಗಮನಿಸುವುದಿಲ್ಲ. ನೀರು ಹರಿದು ಹೋದಾಗಲಷ್ಟೇ ಅದರ ಶಬ್ದ ಕೇಳಿ ಮೋಟಾರ್ ಸ್ಥಗಿತಗೊಳಿಸುವ ಕಡೆ ಮಗ್ನರಾಗುತ್ತಾರೆ. ಅಂದರೆ ಟ್ಯಾಂಕ್ ತುಂಬುವುದನ್ನು ಹತ್ತಿರ ಇದ್ದು ಗಮನಿಸುವುದಿಲ್ಲ. ಅದರ ಪಾಡಿಗೆ ಅದು ತುಂಬಿಕೊಳ್ಳುತ್ತದೆ. ಹರಿಯುವಷ್ಟು ನೀರು ಹರಿದು ಹೋಗುತ್ತದೆ. ಹೇಗೂ ಸಂಪ್‍ನಲ್ಲಿ ನೀರಿದೆ, ಮತ್ತೆ ತುಂಬಿಸಿದರಾಯಿತು ಎನ್ನುವ ಮನೋಭಾವವೂ ಇರುತ್ತದೆ.
ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮನೆಯ ಮೇಲ್ಭಾಗದ ನೀರಿನ ಟ್ಯಾಂಕ್‍ನಿಂದ ನೀರು ಕೆಲವೇ ನಿಮಿಷ ಸೋರಿಕೆಯಾದರೂ ಅದು ರಭಸವಾಗಿ ಹರಿದು ಹೋಗುವುದರಿಂದ ಸಾಕಷ್ಟು ಪ್ರಮಾಣದ ಲೀಟರ್ ಅಪವ್ಯಯವಾಗುತ್ತದೆ. ಅಷ್ಟೂ ನೀರು ಬಳಕೆಗೆ ಬಾರದೆ ವೃಥಾ ಆವಿಯಾಗಿ ಹೋಗುತ್ತದೆ ಅಥವಾ ಚರಂಡಿಗಳಲ್ಲಿ ಹರಿದು ಹೋಗುತ್ತದೆ. ಒಂದೊಂದು ಬಿಂದಿಗೆ ನೀರಿಗೂ ಪರದಾಡುತ್ತಿರುವ ಈ ದಿನಗಳಲ್ಲಿ ಇಷ್ಟು ಪ್ರಮಾಣದ ನೀರು ಹಾನಿಯಾಯಿತೆಂದರೆ ಆ ನಷ್ಟ ಭರಿಸುವವರು ಯಾರು? ಇದು ನಮ್ಮದೇ
ಸ್ವಯಂಕೃತ ತಪ್ಪು ಅಲ್ಲವೆ?
2017ರ ಇಸವಿಯನ್ನು ಒಮ್ಮೆ ನೆನಪಿಸಿಕೊಂಡರೆ ಮೈ ಜುಂ ಎನ್ನಿಸುತ್ತದೆ. ಭೀಕರ ಬರಗಾಲದ ಆ ವರ್ಷ ತುಮಕೂರು ನಗರದಲ್ಲಿ ಅಷ್ಟೇ ಏಕೆ ಎಲ್ಲಿಯೂ ನೀರು ಸಿಗುತ್ತಿರಲಿಲ್ಲ. ಕೆರೆಕಟ್ಟೆಗಳು ಬತ್ತಿ ಹೋಗಿ ಕೊಳವೆ ಬಾವಿಗಳ ಮೂಲಕ ನೀರು ಸಂಗ್ರಹಿಸಿ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆಗ ಬಿಂದಿಗೆ ನೀರು ಹಿಡಿದುಕೊಳ್ಳಲು ಮಹಿಳೆಯರು ಕ್ಯೂನಲ್ಲಿ ನಿಲ್ಲುತ್ತಿದ್ದರು. ನಾಲ್ಕು ಅಥವಾ ಐದು ಬಿಂದಿಗೆ ನೀರು ಸಿಕ್ಕಿದರೆ ಹೆಚ್ಚು. ಅಂತಹ ಕ್ಲಿಷ್ಟಕರ ದಿನಗಳನ್ನು ನಾವು ನೋಡಿದ್ದೇವೆ.
ಬಹುಶಃ ನೀರಿನ ಬೆಲೆ ಏನೆಂಬುದು ಅರ್ಥವಾಗಿದ್ದೇ ಆಗ. ಆನಂತರದ ವರ್ಷ ಉತ್ತಮ ಮಳೆಯಾಯಿತಾದರೂ ಅಂತರ್ಜಲ ವೃದ್ಧಿಯಾಗಲಿಲ್ಲ. ಇದರಿಂದಾಗಿ ಈ ವರ್ಷವೂ ನೀರಿನ ಕೊರತೆ ಕಾಣುವಂತಾಗಿದೆ. ಈಗಾಗಲೇ ತುಮಕೂರು ನಗರದ ಬಹಳಷ್ಟು ಕಡೆಗಳಲ್ಲಿ ಬೋರ್‍ವೆಲ್‍ಗಳು ಸ್ಥಗಿತಗೊಳ್ಳುತ್ತಿವೆ. ಬುಗುಡನಹಳ್ಳಿ ನೀರಿನ ಕೆರೆಯೂ ಬರಿದಾಗುತ್ತಿದೆ. ಮಳೆಗಾಲ ಬಾರದೇ ಹೋದರೆ ಮುಂದೇನು ಎಂಬ ಸ್ಥಿತಿ ಎದುರಾಗಿದೆ. ಇಂತಹ ಸಂಕಷ್ಟ ದಿನಗಳಲ್ಲಿ ನಾವು ಇರುವಾಗ ನೀರಿನ ಬಗ್ಗೆ ಅರಿತಷ್ಟೂ ಒಳ್ಳೆಯದು.
ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನೀರು ಉಳಿತಾಯ ಮಾಡುವುದು, ನೀರಿನ ಮಿತ ಬಳಕೆ ಜೊತೆಗೆ ನೀರು ವೇಸ್ಟ್ ಆಗದಂತೆ ನೋಡಿಕೊಳ್ಳುವ ಕರ್ತವ್ಯ ಬದ್ಧತೆ ಎಲ್ಲರದ್ದಾಗಲಿ. ಕೊನೇ ಪಕ್ಷ ಈ ಲೇಖನ ಓದಿದ ನಂತರವಾದರೂ ನೀರನ್ನು ಅತಿಯಾಗಿ ಬಳಕೆ ಮಾಡುವುದನ್ನು ನಿಲ್ಲಿಸಲಿ. ಅದೇ ನಾವು ಸಮಾಜಕ್ಕೆ ನೀಡುವ ಕೊಡುಗೆ.