ನೀರು ಅಪವ್ಯಯದಲ್ಲಿ ಬೆಂಗಳೂರಿಗೆ 2ನೇ ಸ್ಥಾನ

ತುಮಕೂರು

     ಭಾರತದ ವಿವಿಧ ಪ್ರಸಿದ್ಧ ನಗರಗಳ ಪೈಕಿ ಅತಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿರುವ ನಗರಗಳಲ್ಲಿ ಬೆಂಗಳೂರು ಒಂದು. ಜನಸಂಖ್ಯೆಯಲ್ಲಿ ರಾಷ್ಟ್ರದಲ್ಲಿ ಈ ನಗರ ಮೂರನೇ ಸ್ಥಾನ ಪಡೆದಿದೆ. ಜನಸಂಖ್ಯೆಯ ಹೆಗ್ಗಳಿಕೆಯ ಜೊತೆಗೆ ನೀರು ಅಪವ್ಯಯದಲ್ಲಿಯೂ ಬೆಂಗಳೂರು ಹೆಗ್ಗಳಿಕೆ ಗಳಿಸಿದೆ. ನೀರು ಅಪವ್ಯಯ ಮಾಡುವುದರಲ್ಲಿ ಎರಡನೇ ಸ್ಥಾನದಲ್ಲಿದೆ.

     ನವದೆಹಲಿ, ಚೆನ್ನೈ ಮತ್ತು ಮುಂಬೈ ನಗರಗಳಲ್ಲಿ ಕ್ರಮವಾಗಿ ಶೇ.26ರಷ್ಟು, ಶೇ.20 ಹಾಗೂ ಶೇ.18 ರಷ್ಟು ನೀರು ವೇಸ್ಟೇಜ್ ಆಗುತ್ತಿದ್ದರೆ, ಬೆಂಗಳೂರಿನಲ್ಲಿ ಶೇ.49 ರಷ್ಟು ನೀರು ಅಪವ್ಯಯವಾಗುತ್ತಿದೆ. ನ್ಯಾಷನಲ್ ಕಮೀಷನ್ ಫಾರ್ ಇರಿಗೇಟೆಡ್ ವಾಟರ್ ರೀಸೋರ್ಸ್ ಡೆವಲಪ್‍ಮೆಂಟ್ ಆಫ್ ಇಂಡಿಯಾ ನಡೆಸಿರುವ ಅಧ್ಯಯನದ ಪ್ರಕಾರ ಕೆಲವು ನಗರಗಳಲ್ಲಿ ನೀರು ಅಪವ್ಯಯವಾಗುವ ಪ್ರಮಾಣ ಹೆಚ್ಚುತ್ತಿದೆಯಂತೆ.

    ವಿಶ್ವದ ಜನಸಂಖ್ಯೆಯನ್ನು ಲೆಕ್ಕ ಹಾಕಿದರೆ ಶೇ.17 ರಷ್ಟು ಜನಸಂಖ್ಯೆಯನ್ನು ಭಾರತ ಹೊಂದಿದೆ. ಜನಸಂಖ್ಯೆಗೆ ಅನುಗುಣವಾಗಿ ಈ ದೇಶದಲ್ಲಿ ನೀರಿನ ಸೌಲಭ್ಯ ಇಲ್ಲ. ಶೇ.4 ರಷ್ಟು ಭಾಗ ಮಾತ್ರವೇ ನಮ್ಮ ದೇಶದಲ್ಲಿ ಶುದ್ಧ ಕುಡಿಯುವ ನೀರು ದೊರಕುತ್ತಿದೆ. ಎನ್.ಸಿ.ಐ.ಡಬ್ಲ್ಯೂ.ಆರ್.ಡಿ. ನೀಡಿರುವ ವರದಿ ಪ್ರಕಾರ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದರೂ ನೀರು ನಿರ್ವಹಣೆಯಲ್ಲಿ ಮಾತ್ರ ಹಿಂದುಳಿದಿದೆ ಎಂಬ ಅಂಶವನ್ನು ಗುರುತಿಸಿದೆ.

      ಭಾರತದಲ್ಲಿ ನೀರಿನ ಕೊರತೆ ಇದೆ ಎಂದು ವರದಿ ಹೇಳಿಲ್ಲ. ಆದರೆ ಇರುವ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ವೈಜ್ಞಾನಿಕತೆ ಇಲ್ಲಿ ಇಲ್ಲ. ಶುದ್ಧ ನೀರನ್ನು ಬಳಸಿಕೊಳ್ಳುವ ಅವಕಾಶಗಳು ಇಲ್ಲಿಲ್ಲ. ವಿಪರೀತವಾಗಿ ನೀರು ವ್ಯಯವಾಗುತ್ತಿರುವುದು ಹಾಗೂ ಇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗುತ್ತಿರುವುದರಿಂದಲೇ ಭಾರತ ದೇಶ ನೀರಿನ ಕೊರತೆ ಎದುರಿಸಲು ಕಾರಣವಾಗಿದೆ ಎಂಬ ಅಂಶವನ್ನು ವರದಿ ಬೊಟ್ಟು ಮಾಡಿ ಹೇಳಿದೆ. ನೀರು ನಿರ್ವಹಣ ವಿಧಾನದ ಬಗ್ಗೆ ಹೆಚ್ಚು ಒತ್ತು ಕೊಡಬೇಕೆಂದು ಪ್ರತಿಪಾದಿಸಲಾಗಿದೆ.

      ಭಾರತದ 7 ಪ್ರಸಿದ್ಧ ನಗರಗಳು ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಭೀಕರ ಸನ್ನಿವೇಶವನ್ನು ಎದುರು ನೋಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ನೀರು ನಿರ್ವಹಣಾ ತಂತ್ರಜ್ಞಾನ ಮತ್ತು ನೀರಿನ ಸದ್ಬಳಕೆಯ ಬಗ್ಗೆ ಅರಿವು ಹೊಂದಬೇಕಿದೆ. ಭಾರತದಲ್ಲಿ ಶೇ.50 ರಷ್ಟು ನೀರು ಅಪವ್ಯಯವಾಗುತ್ತಿರುವ ಬಗ್ಗೆ ಹಾಗೂ ಈ ಅಪವ್ಯಯ ತಡೆಯುವಲ್ಲಿ ವಿಫಲವಾಗಿರುವ ಬಗ್ಗೆ ವರದಿಗಳು ತಿಳಿಸಿದರೂ ಸಹ ಎಚ್ಚೆತ್ತುಕೊಳ್ಳದೇ ಇರುವುದು ದುರಂತ. ವರದಿಯು ಉಲ್ಲೇಖಿಸಿರುವ ಪ್ರಮುಖ ಅಂಶಗಳಲ್ಲಿ ನಮ್ಮ ದೇಶದಲ್ಲಿ ಶುದ್ಧ ನೀರು ಹೆಚ್ಚು ಲೀಕೇಜ್ ಆಗುತ್ತಿದೆಯಂತೆ. ಅಲ್ಲದೆ, ನೀರು ನಿರ್ವಹಣೆಗೆ ಸುವ್ಯವಸ್ಥಿತ ವಿಧಾನಗಳೇ ಇಲ್ಲವಂತೆ.

   ಮುಂಗಾರು ಮಾರುತಗಳು ಭಾರತದಲ್ಲಿ ಯಥೇಚ್ಛವಾಗಿ ಮಳೆ ಸುರಿಸುತ್ತವೆ. ಈಗಷ್ಟೇ ಕೆಲವು ವರ್ಷಗಳು ಮಳೆ ಇಲ್ಲದೇ ಇರಬಹುದು. ಅದಕ್ಕೆ ನಾವು ಕಾರಣರಾಗಿದ್ದೇವೆ. ಸತತವಾಗಿ ಮತ್ತು ಯಥೇಚ್ಛವಾಗಿ ಬೀಳುವ ಮಳೆಯ ನೀರನ್ನು ಸುವ್ಯವಸ್ಥಿತ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುವ ವಿಧಾನಗಳು ನಮ್ಮಲ್ಲಿ ಇಲ್ಲ. ಶೇ.36 ರಷ್ಟು ಮಳೆಯ ನೀರನ್ನು ಮಾತ್ರವೇ ನಾವು ಬಳಕೆ ಮಾಡಿಕೊಳ್ಳುತ್ತಿದ್ದು, ಉಳಿದ ನೀರು ಸಮುದ್ರದ ಪಾಲು ಅಥವಾ ಬೇರೆಲ್ಲಿಯೊ ಹರಿದು ಹೋಗುವಂತಹ ಅವ್ಯವಸ್ಥೆ ಇದೆ.

      ಮಳೆಯ ನೀರು ಹೆಚ್ಚು ಸಂಗ್ರಹವಾಗುವಂತಹ ಸ್ಟೋರೇಜ್ ಸಾಮಥ್ರ್ಯ ನಿರ್ಮಾಣ ನಮ್ಮಲ್ಲಿ ಆಗಿಲ್ಲ. ಮಳೆಯಿಂದಲೇ ಕೃಷಿ ಮಾಡುವ ಕೃಷಿ ವಿಧಾನದಲ್ಲಿ ಶೇ.35 ರಷ್ಟು ನೀರನ್ನು ಮಾತ್ರವೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಉಳಿದ ನೀರು ಅಪವ್ಯಯವಾಗಿ ಹೋಗುತ್ತಿದೆ. ಕೃಷಿಗೆ ನೀರನ್ನು ಎಷ್ಟು ಮತ್ತು ಹೇಗೆ ಬಳಕೆ ಮಾಡಬೇಕು ಎಂಬ ವಿಧಾನಗಳನ್ನು ತಿಳಿಸುವಲ್ಲಿ ವಿಫಲರಾಗಿದ್ದೇವೆ. ವಿವಿಧ ಇಲಾಖೆಗಳು ಕೆಲಸ ಮಾಡುತ್ತಿದ್ದರೂ ಅಂತಹ ಇಲಾಖೆಗಳು ಮತ್ತು ಅಧಿಕಾರಿಗಳು ನಾಮಕಾವಸ್ಥೆ ಆಗಿದ್ದಾರೆ. ನೀರಿನ ಅರಿವು ಮೂಡಿಸುವಲ್ಲಿ ಸಂಪೂರ್ಣ ವಿಫಲ ಹೊಂದಿರುವುದರಿಂದಲೇ ನೀರಿನ ಸದ್ಬಳಕೆ ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮ ನೀರಿನ ಕೊರತೆ ಎದುರಿಸಬೇಕಾಗಿ ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap