ಬೆಂಗಳೂರು:
ನಗರದಲ್ಲಿ ಬೇಸಿಗೆಗೂ ಮುನ್ನವೇ ವಾಡಿಕೆಗಿಂತ ಮೂರ್ನಾಲ್ಕು ಡಿಗ್ರಿ ತಾಪಮಾನ ಹೆಚ್ಚಳವಾಗಿದ್ದು, ಚಳಿಗಾಲ ಮುಕ್ತಾಯಕ್ಕೂ ಮುನ್ನವೇ ಬೆಂಗಳೂರಿಗರಿಗೆ ಬಿಸಿಲ ಬೇಗೆ ತಟ್ಟುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪರಿಸ್ಥಿತಿ ಎದುರಿಸಲು ಸಿದ್ಧತೆ ಆರಂಭಿಸಿದೆ.
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ನೀರಿನ ಟ್ಯಾಂಕರ್ಗಳು ಮತ್ತು ಬೋರ್ವೆಲ್ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ನಿವಾಸಿಗಳು, ವಿಶೇಷವಾಗಿ ಬೆಂಗಳೂರಿನ ಹೊರ ಪ್ರದೇಶಗಳ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ, ಕಾವೇರಿ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುವ ಅಭಿಯಾನವನ್ನು ತೀವ್ರಗೊಳಿಸಿದೆ.
ಬೇಸಿಗೆಯ ಸಂದರ್ಭದಲ್ಲಿ ಅಂತರ್ಜಲ ಕುಸಿಯವ ಬಗ್ಗೆ ಐಐಎಸ್ಸಿ ವರದಿಯಲ್ಲಿ ಮುನ್ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಅಂತರ್ಜಲ ಕುಸಿಯುತ್ತಿರುವ ಪ್ರದೇಶಗಳಲ್ಲಿ ಪರ್ಯಾಯವಾಗಿ ನೀರಿನ ವ್ಯವಸ್ಥೆ ಒದಗಿಸಲು ಬಿಡಬ್ಲ್ಯೂಎಸ್ಎಸ್ಬಿ ಸಿದ್ಧತೆ ಆರಂಭಿಸಿದೆ.ಉಪಮುಖ್ಯಮಂತ್ರಿ (ಡಿಸಿಎಂ) ಡಿಕೆ ಶಿವಕುಮಾರ್ ಅವರ ನಿರ್ದೇಶನಗಳನ್ನು ಅನುಸರಿಸಿ, ಮುಂಬರುವ ಬೇಸಿಗೆಯಲ್ಲಿ ಸಂಭಾವ್ಯ ನೀರಿನ ಕೊರತೆಯನ್ನು ಪರಿಹರಿಸಲು ಮಂಡಳಿಯು ಸಿದ್ಧತೆ ನಡೆಸುತ್ತಿದೆ ಎಂದು ಬಿಡಬ್ಲ್ಯೂಎಸ್ಎಸ್ಬಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
ಇತ್ತೀಚೆಗೆ ಬಿಬಿಎಂಪಿಯೊಂದಿಗೆ ವಿಲೀನಗೊಂಡ 110 ಹಳ್ಳಿಗಳ ಅಧಿಕಾರಿಗಳಿಗೆ ನಗರದ ಹೊರ ವಲಯದಲ್ಲಿ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಂತೆ, ಕಾವೇರಿ ಸಂಪರ್ಕ ಅಭಿಯಾನವನ್ನು ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.ಏತನ್ಮಧ್ಯೆ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ನ ಪದಾಧಿಕಾರಿಗಳೊಂದಿಗೆ ನೀರು ಸರಬರಾಜು ಕುರಿತು ಸಭೆ ನಡೆಸಿದರು.
ಕಳೆದ ವರ್ಷಜದ ಬೇಸಿಗೆ ಸಂದರ್ಭದಲ್ಲಿ ಅಪಾರ್ಟ್ಮೆಂಟ್ ಫೆಡರೇಶನ್ ಉತ್ತಮವಾಗಿ ಸಹಕರಿಸಿತ್ತು, ಈ ಬಾರಿ ಕಾವೇರಿ ನೀರು ಸರಬರಾಜು ಯೋಜನೆಯ ಐದನೇ ಹಂತದ ಅನುಷ್ಠಾನದೊಂದಿಗೆ ಬೇಡಿಕೆಯನ್ನು ಪೂರೈಸಲು ನಮ್ಮಲ್ಲಿ ಈಗ ಸಾಕಷ್ಟು ನೀರಿದೆ. ಬಿಡಬ್ಲ್ಯೂಎಸ್ಎಸ್ಬಿ ಈ ನೀರನ್ನು ಅಪಾರ್ಟ್ಮೆಂಟ್ಗಳಿಗೆ ಪೂರೈಸಲು ಸಿದ್ಧವಾಗಿದೆ ಎಂದು ತಿಳಿಸಿದರು.
ಇಲ್ಲಿಯವರೆಗೆ, 2,643 ಅಪಾರ್ಟ್ಮೆಂಟ್ಗಳು ಕಾವೇರಿ ನೀರು ಸಂಪರ್ಕ ಅಭಿಯಾನದ ಮೂಲಕ ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿವೆ. ಆದಾಗ್ಯೂ, ಸುಮಾರು 1,252 ಅಪಾರ್ಟ್ಮೆಂಟ್ಗಳು ಇನ್ನೂ ಅರ್ಜಿ ಸಲ್ಲಿಸಬೇಕಾಗಿದೆ. ಅರ್ಜಿ ಸಲ್ಲಿಸಿದ ಮತ್ತು ಅರ್ಜಿ ಸಲ್ಲಿಸದ ಅಪಾರ್ಟ್ಮೆಂಟ್ಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು.
