ಫೆ. 25ರಂದು ಕೇಂದ್ರ ಜಲಶಕ್ತಿ ಸಚಿವರ ಭೇಟಿ ಮಾಡಲಿರುವ ಡಿಸಿಎಂ

ಉದಯಪುರ

    ಫೆಬ್ರವರಿ 25 ರಂದು ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ಮಾಡಲಿದ್ದು, ಭೇಟಿ ವೇಳೆ ಮೇಕೆದಾಟು, ಮಹದಾಯಿ ಸೇರಿ ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಲಿದ್ದಾರೆಂದು ತಿಳಿದುಬಂದಿದೆ.

    ಉದಯಪುರದಲ್ಲಿ ಕೆಂದ್ರ ಜಲಶಕ್ತಿ ಸಚಿವಾಲಯ ನಡೆಸುತ್ತಿರುವ ಅಖಿಲ ಭಾರತ ರಾಜ್ಯಗಳ ಜಲಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಶಿವಕುಮಾರ್ ಅವರು ಭಾಗಿಯಾಗಿದ್ದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ, ಈ ಹಿಂದೆ ಘೋಷಿಸಲಾಗಿರುವ ಅನುದಾನ ಹಾಗೂ ಮಹದಾಯಿ, ಮೇಕೆದಾಟು ಹಾಗೂ ಕೃಷ್ಮಾ ಮೇಲ್ದಂಡೆ ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಕೇಂದ್ರ ಸರ್ಕಾರದಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.

    ಉದಯಪುರದಲ್ಲಿ ನಡೆದ ನೀರಾವರಿ ಸಚಿವರ ಸಮ್ಮೇಳನವು ಎಲ್ಲ ರಾಜ್ಯಗಳ ಸಚಿವರನ್ನು ಒಗ್ಗೂಡಿಸಿದೆ. ಎಲ್ಲಾ ರಾಜ್ಯಗಳ ಅತ್ಯುತ್ತಮ ನೀರಾವರಿ ವ್ಯವಸ್ಥೆಗಳ ಪರಿಚಯವಾಗಿದೆ. ಇದರ ಜೊತೆಗೆ ನಮ್ಮಲ್ಲಿರುವ ಸಮಸ್ಯೆಗಳನ್ನು ಅರಿತು, ಅವುಗಳನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಮುಂದೆ ಇಡಬಹುದಾಗಿದೆ. ನೀರನ್ನು ಹೇಗೆ ಸಂರಕ್ಷಿಸಬೇಕು, ಮರುಬಳಕೆ ಮಾಡಬೇಕು. ಎಂಬುದು ಈ ಸಮ್ಮೇಳನದ ಉದ್ದೇಶವಾಗಿದೆ. ನಮ್ಮ ಯೋಜನೆಗಳನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಸಮಸ್ಯೆಗಳನ್ನು ಬಗೆಹರಿಸಬೇಕು. ರಾಜ್ಯಗಳ ನಡುವಣ ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು ಎಂದು ತಿಳಿಸಿದರು. 

    ಸಮ್ಮೇಳನದ ವೇಳೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನೀರಾವರಿ ಸಚಿವರ ಜತೆ ತುಂಗಭದ್ರಾ ನದಿಯ ನೀರಿನ ಬಳಕೆ ಚರ್ಚೆ ನಡೆಸಲಾಗಿದೆ. ತುಂಗಭದ್ರಾ ನದಿಯ 30 ಟಿಎಂಸಿ ನೀರನ್ನು ಉಳಿಸಿ, ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ಮಾಡಲು ವಿಜಯವಾಡಕ್ಕೆ ಹೋಗಿ ಮತ್ತೊಮ್ಮ ಚರ್ಚೆ ಮಾಡುವುದಾಗಿ ತಿಳಿಸಿದ ಡಿಸಿಎಂ, ಇದಕ್ಕಾಗಿ ಮೂರು ರಾಜ್ಯಗಳು ಸೇರಿ ಕಾರ್ಯತಂತ್ರ ರೂಪಿಸಬೇಕಿದೆ ಎಂದು ಹೇಳಿದರು.

   ನೀರಾವರಿಯು ದೇಶದ ಪ್ರಮುಖ ಕ್ಷೇತ್ರವಾಗಿದೆ. ರೈತರು, ಕೈಗಾರಿಕೆಗಳು, ಕುಡಿಯುವ ನೀರು ಹಾಗೂ ನಗರೀಕರಣಕ್ಕೆ ನೀರಾವರಿ ಯೋಜನೆ ಅಗತ್ಯವಾಗಿದೆ. ಹೀಗಾಗಿ ಜಲಶಕ್ತಿ ಸಚಿವಾಲಯ ದೇಶದಲ್ಲಿ ಸ್ಪಷ್ಟವಾದ ನೀಲನಕ್ಷೆ ಹಾಗೂ ಮಾರ್ಗಸೂಚಿ ರೂಪಿಸಬೇಕಿದೆ. ಜತೆಗೆ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ತಿಳಿಸಿದರು.

Recent Articles

spot_img

Related Stories

Share via
Copy link