ಜಮ್ಮು:
ಜಮ್ಮು ಪ್ರದೇಶದ ಅಖ್ನೂರ್ ಸೆಕ್ಟರ್‌ನಲ್ಲಿ ಇಂದು ಬೆಳಗ್ಗೆ ಮತ್ತೆ ಗುಂಡಿನ ಚಕಮಕಿ ನಡೆದಿದೆ. ಇಲ್ಲಿನ ಹಳ್ಳಿಯೊಂದರಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕನನ್ನು ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಲ್ಲಿಯವರೆಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಜೋಗ್ವಾನ್ ಗ್ರಾಮದ ಅಸ್ಸಾನ್ ದೇವಸ್ಥಾನದ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಅಡಗಿರುವ ಮೂರನೇ ಉಗ್ರನನ್ನು ತಟಸ್ಥಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸಾಗುತ್ತಿದ್ದ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ಆಂಬ್ಯುಲೆನ್ಸ್‌ಗೆ ಗುಂಡು ಹಾರಿಸಲಾಯಿತು. ವಿಶೇಷ ಪಡೆಗಳು ಮತ್ತು ಎನ್‌ಎಸ್‌ಜಿ ಕಮಾಂಡೋಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರಲ್ಲಿ ಒಬ್ಬನನ್ನು ಸಂಜೆಯ ವೇಳೆಗೆ ಹೊಡೆದುರುಳಿಸಲಾಗಿತ್ತು. ಬಳಿಕ ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಇಂದು ಬೆಳಗ್ಗೆ ಭದ್ರತಾ ಪಡೆಗಳು ಖೌರ್‌ನ ಭಟ್ಟಲ್ ಏರಾದಲ್ಲಿ ಬೆಳಗ್ಗೆ 7 ಗಂಟೆಯ ಸುಮಾರಿಗೆ ಅಡಗಿಕೊಂಡಿದ್ದ ಭಯೋತ್ಪಾದಕರ ವಿರುದ್ಧ ಗುಂಡಿನ ದಾಳಿ ಮುಂದುವರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ಭಯೋತ್ಪಾದಕನನ್ನು ಹೊಡೆದುರುಳಿಸುವ ಮೊದಲು ಒಂದು ಗಂಟೆಗೂ ಹೆಚ್ಚು ಕಾಲ ತೀವ್ರವಾದ ಗುಂಡಿನ ದಾಳಿ ನಡೆದಿದ್ದವು. ಅಷ್ಟೇ ಅಲ್ಲ ಭಯಂಕರ ಸ್ಫೋಟಗಳು ಮುಂದುವರೆದವು. ಮೂರನೇ ಉಗ್ರನ ಸ್ಥಳ ಪತ್ತೆಯಾಗಿದ್ದು, ಸದ್ಯ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ನಾಲ್ಕು ವರ್ಷದ ಸೇನಾ ಶ್ವಾನ ಫ್ಯಾಂಟಮ್ ಕಾರ್ಯಾಚರಣೆ ವೇಳೆ ಗುಂಡು ತಗುಲಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಅಡಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಹೆಲಿಕಾಪ್ಟರ್‌ಗಳು ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ.
