ಜಮ್ಮು-ಕಾಶ್ಮೀರ: ನೂತನ ಸಂಪುಟದ ಮೊದಲ ನಿರ್ಣಯ

ಶ್ರೀನಗರ:

   ಇತ್ತೀಚಿಗೆ ನಡೆದ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ನ್ಯಾಶನಲ್ ಕಾನ್ಫರೆನ್ಸ್ (NC) ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದೆ. ನೂತನ ಸಚಿವ ಸಂಪುಟದಲ್ಲಿ ರಾಜ್ಯ ಸ್ಥಾನಮಾನ ಮರು ಸ್ಥಾಪನೆಗೆ ನಿರ್ಣಯ ಅಂಗೀಕರಿಸಲಾಗುವುದು ಎಂದು ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಎದುರು ನೋಡುತ್ತಿರುವ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

   ಈ ಮಧ್ಯೆ ಜಮ್ಮು-ಕಾಶ್ಮೀರ ಕಾಂಗ್ರೆಸ್ ಮುಖ್ಯಸ್ಥ ತಾರಿಕ್ ಹಮೀದ್ ಕರ್ರಾ, ಸರ್ಕಾರ ರಚನೆ ಕುರಿತು ಪಕ್ಷದ ನಾಯಕರನ್ನು ಸಮಾಲೋಚಿಸಲು ದೆಹಲಿಗೆ ಆಗಮಿಸಿದ್ದಾರೆ. ನ್ಯಾಶನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ಸಭೆ ನಂತರ ಮೈತ್ರಿಕೂಟದ ನಾಯಕನನ್ನು ನಿರ್ಧರಿಸಲು ಸಭೆ ನಡೆಯಲಿದೆ ಎಂದು ಒಮರ್ ಬುಧವಾರ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

   90 ಸದಸ್ಯ ಬಲದ ಜಮ್ಮು-ಕಾಶ್ಮೀರ ಅಸೆಂಬ್ಲಿಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೈತ್ರಿಕೂಟದ ಶಾಸಕರ ಬೆಂಬಲವಿರುವ ಪತ್ರ ಪಡೆದು ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಲಾಗುವುದು, ಪದಗ್ರಹಣ ಸಮಾರಂಭ ನಿಗದಿ ಮಾಡುವಂತೆ ಮನವಿ ಮಾಡಲಾಗುವುದು ಎಂದು ಮೈತ್ರಿಕೂಟದ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ನಾನು ಮುಂದಿನ ಸಿಎಂ ಎಂದು ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದರೂ ಶಾಸಕರೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು. ಇದು ಮೈತ್ರಿ ಮಾಡಿಕೊಳ್ಳಬೇಕಾದ ನಿರ್ಧಾರ. ನಾನು ಯಾವಾಗಲೂ ನಿಯಮಗಳ ಮೂಲಕ ಕೆಲಸಗಳನ್ನು ಮಾಡಲು ಬಯಸುತ್ತೇನೆ ಎಂದು ಹೇಳಿದರು.

   “ನಮ್ಮ ಸಂಪುಟದ ಮೊದಲ ನಡಾವಳಿ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವಂತೆ ಒತ್ತಾಯಿಸುವ ನಿರ್ಣಯವನ್ನು ಆಂಗೀಕರಿಸುವುದು. ಯಾರೇ ಮುಖ್ಯಮಂತ್ರಿಯಾದರೂ, ಆ ನಿರ್ಣಯದೊಂದಿಗೆ ದೆಹಲಿಗೆ ತೆರಳಿ ತಮ್ಮ ಭರವಸೆಯನ್ನು ಈಡೇರಿಸುವಂತೆ ದೇಶದ ಹಿರಿಯ ನಾಯಕತ್ವವನ್ನು ಒತ್ತಾಯಿಸುವರು. ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಾತ್ರ ರಾಜ್ಯ ಸ್ಥಾನಮಾನ ಸಿಗುತ್ತದೆ ಎಂದು ಅವರು ಎಲ್ಲಿಯೂ ಹೇಳಿಲ್ಲ ಎಂದು ಅವರು ತಿಳಿಸಿದರು. 

   ಸಂವಿಧಾನದ 370ನೇ ವಿಧಿ ಪ್ರಸ್ತಾಪಿಸಿದ ಅವರು, ನಾವು ತಕ್ಷಣಕ್ಕೆ ನೀಡಲಾಗದ ಭರವಸೆಯನ್ನು ನೀಡುವ ಮೂಲಕ ಜನರನ್ನು ಮೂರ್ಖರನ್ನಾಗಿಸುವುದಿಲ್ಲ. ಏಕೆಂದರೆ ಆರ್ಟಿಕಲ್ 370 ಕಿತ್ತುಕೊಂಡವರು ಅದನ್ನು ಮರುಸ್ಥಾಪಿಸುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನವಾಗಿರುತ್ತದೆ ಎಂದರು.

Recent Articles

spot_img

Related Stories

Share via
Copy link
Powered by Social Snap