ಉಡುಪಿಯಲ್ಲಿ ಬಿಜೆಪಿಯ ಜನಾಕ್ರೋಶ ಯಾತ್ರೆ

ಉಡುಪಿ:

    ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಜನಾಕ್ರೋಶ ಯಾತ್ರೆ ಉಡುಪಿಯಲ್ಲಿಂದು ಭ್ರಷ್ಟ ಹಾಗೂ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸಲಾಯಿತು. ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಬಿ.ವೈ ವಿಜಯೇಂದ್ರ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಪ್ರತಿಭಟನಾ ಜಾಥಾ ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಬಿಜೆಪಿ ಕಚೇರಿಯ ಹಿಂಭಾಗದ ಮೈದಾನದವರೆಗೆ ಸಾಗಿ ಬಂತು.

    ಬೆಲೆ ಏರಿಕೆಯ ಬರೆ ಎಳೆದು ನಿತ್ಯವೂ ಬಡವರನ್ನು ಹಿಂಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸಲು ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಆಕ್ರೋಶ ಹೊರಹಾಕಿದರು. ಓಲೈಕೆ ರಾಜಕಾರಣಕ್ಕೆ ಕಟ್ಟುಬಿದ್ದಿರುವ ರಾಜ್ಯ ಸರ್ಕಾರ ಶೋಷಿತರೂ ಸೇರಿದಂತೆ ಸಮಗ್ರ ಹಿಂದೂ ಸಮುದಾಯಕ್ಕೆ ದ್ರೋಹ ಬಗೆಯುತ್ತಿರುವ ನಿಲುವುಗಳನ್ನು ಖಂಡಿಸಲಾಯಿತು. ಉಡುಪಿಯ ಕಲ್ಸಂಕದಿಂದ ಕಡಿಯಾಳಿಯ ಬಿಜೆಪಿ ಕಚೇರಿವರೆಗೆ ಜನಾಕ್ರೋಶ ಯಾತ್ರೆ ಸಾಗಿ ಅಲ್ಲಿ ಸಮಾವೇಶ ನಡೆಯಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಶ್ರೀರಾಮುಲು, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬ್ರಿಜೇಶ್ ಚೌಟ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೋಡ್ಲಿ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಹರೀಶ್ ಪೂಂಜಾ ಉಪಸ್ಥಿತರಿದ್ದರು.