ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿರುವ ಮುಡಾ ಅಕ್ರಮ ವಿರುದ್ಧ ಹೋರಾಟಕ್ಕಿಳಿದಿರುವ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಇಂದು ಶನಿವಾರದಿಂದ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿದ್ದು, ಅದಕ್ಕೆ ಟಕ್ಕರ್ ಕೊಡಲು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಾಮನಗರದಲ್ಲಿ ಇಂದು ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಯಲಿದೆ.
ನಿತ್ಯ ಒಂದೊಂದು ತಾಲ್ಲೂಕಿನಲ್ಲಿ ಸಭೆ:
ಇಂದು ರಾಮನಗರದಲ್ಲಿ ಸಭೆ, ನಾಳೆ ಚನ್ನಪಟ್ಟಣ, ಆಗಸ್ಟ್ 5 ಮದ್ದೂರು, ಆಗಸ್ಟ್ 6 ಮಂಡ್ಯ, ಆಗಸ್ಟ್ 9ರಂದು ಮೈಸೂರಿನಲ್ಲಿ ಬಹಿರಂಗ ಸಮಾರೋಪ ಸಭೆ ನಡೆಸಲಿದ್ದೇವೆ. ಬಿಜೆಪಿ, ಜೆಡಿಎಸ್ ವಿರುದ್ಧ ನಾವು ಯಾವುದೇ ಪಾದಯಾತ್ರೆ ನಡೆಸುವದಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈಗಾಗಲೇ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಖಂಡಿಸಿ ಸಭೆ ನಡೆಸುತ್ತೇವೆ. ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಹಾಗೂ ಹಿಂದಿನ ಬಿಜೆಪಿ ಸರ್ಕಾರದಲ್ಲಿ ರಾಜ್ಯದಲ್ಲಿ 21 ಹಗರಣಗಳು ನಡೆದಿವೆ ಎಂದು ಆರೋಪಿಸಿ ಕಾಂಗ್ರೆಸ್ ಜನಾಂದೋಲನ ನಡೆಸುತ್ತಿದೆ.