ಧರ್ಮಸ್ಥಳ:
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಖಂಡಿಸಿ ಧರ್ಮಸ್ಥಳದಲ್ಲಿ ಸೋಮವಾರ ಬಿಜೆಪಿಯಿಂದ ಧರ್ಮಸ್ಥಳ ಚಲೋ ಹಾಗೂ ಧರ್ಮಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಮಾತನಾಡಿ, ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಕೆಲವರು ಕಳಂಕ ತರಲು ಕುತಂತ್ರ ಮಾಡಿದ್ದಾರೆ. ಈ ಕಳಂಕ ಹೋಗಲಾಡಿಸಲು ಮಂಜುನಾಥ ತನ್ನ ಮಹಿಮೆ ತೋರಿಸಲಿದ್ದಾರೆ ಎಂದು ತಿಳಿಸಿದರು.
ಅಂಜನಾದ್ರಿಯಿಂದ ಹನುಮಂತನ ದರ್ಶನ ಪಡೆದು, ತುಂಗಭದ್ರಾ ಜಲವನ್ನು ತಂದು ಮಂಜುನಾಥ ಸ್ವಾಮಿಗೆ ಅಭಿಷೇಕ ಮಾಡಲಾಗಿದೆ. ಬಿಜೆಪಿ ಯಾವತ್ತೂ ಕೂಡ ಹಿಂದೂ ಧರ್ಮದ ಪರ ಹೋರಾಟಕ್ಕೆ ಇರುತ್ತೆ. ಹೀಗಾಗಿ ಪುಣ್ಯ ಕ್ಷೇತ್ರದಲ್ಲಿ ಸಮಾವೇಶ ನಡೆಯುತ್ತಿದೆ ಎಂದು ತಿಳಿಸಿದರು.
ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂಬ ಬಿಜೆಪಿ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿ, ಎಸ್‌ಐಟಿ ಕೂಡ ಸಮರ್ಥವಾಗಿದೆ. ಸಿಎಂ ಅವರು ಸ್ಥಳೀಯ ಪೊಲೀಸರೇ ಶಕ್ತರಿದ್ದಾರೆ ಎಂದು ಹೇಳಿದ್ದರು. ಆದರೆ, ಒಂದೇ ದಿನದಲ್ಲಿ ಮಾತು ಬದಲಿಸಿ ಎಸ್‌ಐಟಿ ರಚನೆ ಮಾಡಿದರು. ಅವರಿಗೆ ಮೇಲಿಂದ ಒತ್ತಡವಿತ್ತು ಎಂದು ತಿಳಿಯುತ್ತದೆ ಎಂದು ಟೀಕಿಸಿದರು.
ಎಸ್‌ಐಟಿ ತನಿಖೆಯಿಂದ ಒಳ್ಳೆಯದೇ ಆಯ್ತು. ಯಾಕೆಂದರೆ ಮುಸುಕುಧಾರಿಯ ಮುಖವಾಡ ಬದಲಾಯ್ತು, ಆತನ ಬಂಧನವಾಗಿದೆ. ಸುಜಾತಾ ಭಟ್ ಅವರ ಕಟ್ಟುಕಥೆ ಸುಳ್ಳಿನ ಕಥೆ ಎಂಬುದು ಗೊತ್ತಾಯಿತು. ಯೂಟ್ಯೂಬರ್ಸ್ ಕೂಡ ಬೋಗಸ್ ಎಂದು ತಿಳಿಯಿತು. ಇನ್ನು ಇವರೆಲ್ಲರ ಹಿಂದೆ ಯಾರಿದ್ದಾರೆ? ತಮಿಳುನಾಡಿನ ಸಸಿಕಾಂತ್ ಸೆಂಥಿಲ್ ಹಾಗೂ ದೆಹಲಿಯಲ್ಲಿ ಯಾರ ಕೈವಾಡವಿದೆ?, ವಿದೇಶಿ ಶಕ್ತಿಗಳೂ ಇವೆ. ಇದೆಲ್ಲಾ ಹೊರಗೆ ಬರಬೇಕಾದರೆ ಸಿಬಿಐ, ಎನ್‌ಐಎ ತನಿಖೆ ಆಗಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
