KPCC ಅಧ್ಯಕ್ಷರ ಬಗ್ಗೆ ಹೈಕಮಾಂಡ್ ತೀರ್ಮಾನ: ಜಾರಕೀಹೋಳಿ ಹೇಳಿದ್ದೇನು ಗೊತ್ತಾ….?

ಬೆಳಗಾವಿ:

   ಡಿಕೆ ಶಿವಕುಮಾರ್ ಅವರ ಸ್ಥಾನಕ್ಕೆ ನೂತನ ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬುಧವಾರ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಈ ವಿಚಾರ ನಮ್ಮ ಹಂತದಲ್ಲಿ ನಿರ್ಧಾರವಾಗುವಂತದ್ದಲ್ಲ ಎಂದು ಹೇಳಿದರು.

  ಪಕ್ಷದ ರಾಜ್ಯ ಘಟಕದಲ್ಲಿ ನಾಯಕತ್ವ ಬದಲಾವಣೆಗೆ ಪಕ್ಷದ ಹಲವು ಮುಖಂಡರು ವರಿಷ್ಠರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಒಬ್ಬೊಬ್ಬರು ಎರಡು ಹುದ್ದೆಯಲ್ಲಿದ್ದರೆ ಜವಾಬ್ದಾರಿಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಆದುದರಿಂದ, ಈ ಸಂಬಂಧ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

   ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಎಲ್ಲರೂ ಚರ್ಚೆ ಮಾಡಿದ್ದೇವೆ. ಪಕ್ಷ ಸಂಘಟನೆಗೆ ಹೆಚ್ಚು ಸಮಯ ಮೀಸಲಿಡುವಂತಹ ವ್ಯಕ್ತಿಯ ಹೆಸರನ್ನು ಶಿಫಾರಸ್ಸು ಮಾಡಿದ್ದೇವೆ. ಈ ಸ್ಥಾನಕ್ಕೆ ಮೃಣಾಲ್ ಹೆಬ್ಬಾಳ್ಕರ್ ಹೆಸರು ಚರ್ಚೆಗೆ ಬಂದಿಲ್ಲ.

   ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡುವ ವಿಚಾರದಲ್ಲಿ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದಾರೆ. ಈಗಾಗಲೇ, ಶೇ.70ರಷ್ಟು ನೇಮಕಾತಿಗಳನ್ನು ಮಾಡಲಾಗಿದೆ. ಉಳಿದ ಹುದ್ದೆಗಳಿಗೂ ಶೀಘ್ರದಲ್ಲೆ ಅರ್ಹರನ್ನು ನೇಮಕ ಮಾಡುತ್ತಾರೆ ಎಂದರು.

   ರಾಜ್ಯದಲ್ಲಿ ಸರ್ಕಾರ ಉತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ಬಿಜೆಪಿಯವರು ಅನಾವಶ್ಯಕವಾಗಿ ಗೊಂದಲ ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ ಮೇಲೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ನಮ್ಮ ಸರಕಾರ ಜನಪರವಾಗಿ ಕೆಲಸ ಮಾಡಲಿದೆ. ರಾಜ್ಯದಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಕಡೆ ಸೇತುವೆಗಳು ಹಾಳಾಗಿವೆ. ಅವುಗಳ ದುರಸ್ಥಿಗೆ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ಬಜೆಟ್‍ನಲ್ಲಿ ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕಾಗಿ ಹೆಚ್ಚುವರಿಯಾಗಿ 4 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

Recent Articles

spot_img

Related Stories

Share via
Copy link