ಜಾರ್ಖಂಡ್
ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿದ್ದು, ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. ಇಂದು ಜಾರ್ಖಂಡ್ನ ಎರಡು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಲಿದ್ದಾರೆ. ಜಾರ್ಖಂಡ್‌ನಲ್ಲಿ ನವೆಂಬರ್ 13 ಮತ್ತು ನವೆಂಬರ್ 20 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ನವೆಂಬರ್ 23 ರಂದು ನಡೆಯಲಿದೆ. ಪ್ರಧಾನಿ ಇಂದು ಚೈಬಾಸಾ ಮತ್ತು ಗರ್ಹ್ವಾದಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನಿ ಮೋದಿ ಅವರು ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಿಹಾರದ ಗಯಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಪ್ರಧಾನಿ ಮೋದಿ ಅವರು ಮೊದಲು ಗರ್ವಾದಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ನಂತರ ಅವರು ರಾಂಚಿಗೆ ಹೋಗಲಿದ್ದಾರೆ, ಬಳಿಕ ಮಧ್ಯಾಹ್ನ 2.30ರ ವೇಳೆಗೆ ಚೈಬಾಸಾದಲ್ಲಿ ರ್ಯಾಲಿಯುದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಜಾರ್ಖಂಡ್‌ನಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದರು. ನಮ್ಮ ಸರ್ಕಾರವು ಜಾರ್ಖಂಡ್‌ನಲ್ಲಿ ಯುಸಿಸಿಯನ್ನು ಪರಿಚಯಿಸುತ್ತದೆ ಆದರೆ ಬುಡಕಟ್ಟು ಜನಾಂಗದವರನ್ನು ಅದರ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ.
ಜಾರ್ಖಂಡ್ನ ಕುಟುಂಬಗಳು 500 ರೂ.ಗೆ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಜೊತೆಗೆ, ಒಂದು ವರ್ಷದಲ್ಲಿ ಎರಡು ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು.
ಇದಲ್ಲದೇ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 2.87 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮೊಟ್ಟ ಮೊದಲ ಸಂಪುಟ ಸಭೆಯ ನಂತರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, 2025ರ ನವೆಂಬರ್ ವೇಳೆಗೆ 1.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ಪಕ್ಷವು ಅಧಿಕಾರಕ್ಕೆ ಬಂದರೆ, ಎರಡು ವರ್ಷಗಳವರೆಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತದೆ, ಇದರಿಂದಾಗಿ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಬಹುದು. ಬಿಜೆಪಿಯು ಮಹಿಳೆಯರ ಸಬಲೀಕರಣದ ಧ್ಯೇಯೋದ್ದೇಶದ ಭಾಗವಾಗಿ ‘ಗೋಗೋ-ದೀದಿ’ ಯೋಜನೆಯನ್ನು ಪ್ರಾರಂಭಿಸಲಿದೆ ಮತ್ತು ಕಾರ್ಯಕ್ರಮದ ಅಡಿಯಲ್ಲಿ ಮಹಿಳೆಯರಿಗೆ ತಿಂಗಳಿಗೆ 2,100 ರೂ. ನೀಡಲಾಗುತ್ತದೆ.