ಜಾತಿ ಗಣತಿ ವರದಿ ಜಾರಿಗೆ ಶ್ರೀ ಶೈಲ ಜಗದ್ಗುರು ವಿರೋಧ

ದಾವಣಗೆರೆ:

    ಜಾತಿ ಗಣತಿ ವರದಿಯನ್ನು ತರಾತುರಿಯಲ್ಲಿ ಜಾರಿಗೆ ಸಿದ್ಧವಾಗಿರುವ ರಾಜ್ಯ ಸರ್ಕಾರದ ನಡೆಗೆ ನಮ್ಮ ವಿರೋಧವಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.ವಿನೋಬನಗರದ ಪಿ.ಬಿ.ರಸ್ತೆಯಲ್ಲಿರುವ ಶ್ರೀಶೈಲ ಪೀಠ(ಶ್ರೀಜಗದ್ಗುರು ಪಂಚಾಚಾರ್ಯ ಮಂದಿರ)ದಲ್ಲಿ ಭಾನುವಾರ ಶ್ರೀಗುರು ದೊಡ್ಡ ಬಸವೇಶ್ವರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀಗುರು ಚರಂತಪ್ಪಜ್ಜ ಮಹಾಸ್ವಾಮಿಗಳವರ ೨೧ನೇ ಸ್ಮರಣೋತ್ಸವ ಹಾಗೂ ಚರಂತಾರ್ಯ ಶ್ರೀಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

   ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು, ಜಾತಿ ಗಣತಿ ವರದಿ ಬಿಡುಗಡೆಗೊಳಿಸಲು ಹೊರಟಿರುವ ಸರ್ಕಾರದ ವಿರುದ್ಧ ಧ್ವನಿ ಎತ್ತಿ, ಇದು ಸರಿಯಾದ ಕ್ರಮದಿಂದ ಸಮೀಕ್ಷೆ ನಡೆದಿಲ್ಲ. ಇದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿಕೆ ನೀಡಿರುವುದು ಸೂಕ್ತವಾಗಿದೆ. ನಾವು ಕೂಡ ಅವರ ಹಾದಿಯಲ್ಲಿದ್ದು, ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ, ಬೆಂಬಲಿಸುತ್ತೇವೆ. ಯಾವುದೇ ಕಾರಣಕ್ಕೂ ನಾವು ಜಾತಿ ಗಣತಿ ವರದಿ ಬಿಡುಗಡೆಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

   ಸರ್ಕಾರ ತರಾತುರಿಯಲ್ಲಿ ಜಾತಿ ಗಣತಿ ಮಾಡಿ, ಅನೇಕರ ಆಕ್ಷೇಪವಿದೆ. ಜಾತಿ ಗಣತಿ ಮಾಡುವ ಸಂದರ್ಭದಲ್ಲಿ ನಮ್ಮನ್ನೂ ಯಾರು ಕೇಳಿಲ್ಲ. ಹೀಗೆ ಹೇಳುವವರು ಬಹಳ ಜನ ಇದ್ದಾರೆ. ಹೀಗಾಗಿ ವಸ್ತುನಿಷ್ಠವಾದ ವರದಿ ಆಗುವುದಿಲ್ಲ. ಇಂತಹ ವೇಳೆ ಜಾತಿ ಗಣತಿ ವರದಿಯನ್ನು ಸ್ವೀಕಾರ ಮಾಡಿದರೆ ಸರಿ ಆಗುವುದಿಲ್ಲ ಸರ್ಕಾರಕ್ಕೆ ಸಲಹೆ ನೀಡಿದರು.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇರುವಾಗ ಸರ್ಕಾರ, ಸೂಕ್ತವಾಗಿ, ಸೂಕ್ಷ್ಮವಾಗಿ, ಪ್ರಾಮಾಣಿಕವಾಗಿ ಯಾವುದೇ ಪೂರ್ವಗ್ರಹ ಪೀಡಿತಕ್ಕೆ ಒಳಗಾಗದೆ ವಸ್ತುನಿಷ್ಠವಾಗಿ ಜಾತಿ ಗಣತಿಯನ್ನು ಮಾಡಿದ್ದರೆ ಇಂದು ವಿರೋಧ ಎದುರಿಸುತ್ತಿರಲಿಲ್ಲ. ಹೀಗಾಗಿ ಮತ್ತೊಮ್ಮೆ ಮರು ಜಾತಿ ಗಣತಿ ಮಾಡಿದರೆ ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

   ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು ಸಮಾಜಕ್ಕೆ ಧಕ್ಕೆ ಬಂದ ಸಂದರ್ಭದಲ್ಲಿ ಯಾವುದೇ ಪದವಿ, ಪಕ್ಷನಿಷ್ಠೆ ತೋರಿಸದೆ ಆಡಳಿತ ಪಕ್ಷದ ಸರ್ಕಾರವಿದ್ದರೂ ಧ್ವನಿ ಎತ್ತಿ ಅದನ್ನು ವಿರೋಧಿಸುವ ಕೆಲಸ ಮಾಡುತ್ತಾರೆ. ಈ ರೀತಿ ವೀರಶೈವ ಲಿಂಗಾಯತ ಜನಪ್ರತಿನಿಧಿಗಳು ಇಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

   ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಅನಾದಿ ಕಾಲದಿಂದಲೂ ಮಠಮಾನ್ಯಗಳು ಅನ್ನದಾಸೋಹ, ಶಿಕ್ಷಣ ದಾಸೋಹ ಮತ್ತು ಜ್ಞಾನ ದಾಸೋಹ ಮೂಲಕ ಸಮಾಜ ಅಭಿವೃದ್ಧಿಯೊಂದಿಗೆ ಭಕ್ತರ ಮನದಲ್ಲಿ ಅಚ್ಚಯಳಿದೆ ಉಳಿದಿವೆ ಎಂದು ಅಭಿಪ್ರಾಯಪಟ್ಟರು.
ಸರ್ಕಾರಗಳು ಶಿಕ್ಷಣ, ಅನ್ನ, ಜ್ಞಾನಕ್ಕೆ ಒತ್ತು ನೀಡುವ ಪೂರ್ವದಲ್ಲಿಯೇ ಮಠಮಾನ್ಯಗಳು ಹಸಿದವರಿಗೆ ಅನ್ನ, ಅನಕ್ಷರಸ್ಥರಿಗೆ ಶಿಕ್ಷಣ, ಜ್ಞಾನ ದಾಸೋಹ ಉಚಿತವಾಗಿ ನೀಡುವ ಮೂಲಕ ನಮ್ಮ ಬದುಕು, ವ್ಯಕ್ತಿತ್ವ ವಿಕಾಸನಗೊಳಿಸಿವೆ ಎಂದು ಸ್ಮರಿಸಿದರು.

   ಜನಪ್ರತಿನಿಧಿಗಳು, ಸರ್ಕಾರಿ ನೌಕರರು, ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಂಡವರಿಗೆ ನಿವೃತ್ತಿ ಇದೆ. ಆದರೆ ಗುರುಗಳಿಗೆ ಯಾವುದೇ ನಿವೃತ್ತಿ ಇಲ್ಲ. ಅವರ ಸ್ಥಾನಮಾನಗಳು ಭದ್ರವಾಗಿರುತ್ತವೆ. ಮಾತ್ರವಲ್ಲ ಲೋಕಕಲ್ಯಾಣಕ್ಕಾಗಿ ಅವರು ವಿರಮಿಸದೆ ಹಗಲಿರುಳು ಪ್ರವಾಸ ಮಾಡುತ್ತಾ ಧರ್ಮ ಜಾಗೃತಿ ಮಾಡುತ್ತಾರೆ. ಕುರ್ಚಿಗಳು ಶಾಶ್ವತವಲ್ಲ, ನಾವು ಮಾಡುವ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಎಚ್.ಎಂ.ಗುರುಬಸವರಾಜಯ್ಯ ಸಂಪಾದಿಸಿದ ಗ್ರಂಥವನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಶ್ರೀಶೈಲ ಪೀಠದ ಜಗದ್ಗುರುಗಳು ಲೋಕಾರ್ಪಣೆ ಮಾಡಿದರು.

   ಕಾರ್ಯಕ್ರಮದಲ್ಲಿ ಬಿಳಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಯರಗುಂಟೆ ಶ್ರೀಪರಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಂಪಿ ಕನ್ನಡ ವಿವಿಯ ಸಹಾಯಕ ಕುಲಸಚಿವ ಡಾ.ಎಂ.ಎಂ.ಶಿವಪ್ರಕಾಶ್, ಎಚ್.ಎಂ. ಗುರುಬಸವರಾಜಯ್ಯ, ಪ್ರೊ.ಎಚ್.ವಿ.ಬಿಕ್ಷಾವರ್ತಿಮಠ, ಎಸ್.ವಿ.ಪಾಟೀಲ್ ಗುಂಡೂರು, ದೇವೇಂದ್ರ ಕುಮಾರ್ ಪತ್ತಾರ್ ಸೇರಿದಂತೆ ಇನ್ನಿತರರಿದ್ದರು.