ಬೆಂಗಳೂರು
ಹೃದಯ ಸಂಬಂಧಿ ಚಿಕಿತ್ಸೆಗೆ ದೇಶ-ವಿದೇಶಗಳಲ್ಲೂ ಹೆಸರು ಮಾಡಿರುವ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಮತ್ತೊಂದು ವಿಶಿಷ್ಟ ಸಾಧನೆ ಮಾಡಿದೆ. ಟೆಟ್ರಾಲಜಿ ಆಫ್ ಫಾಲಟ್ ಎಂಬ ಹೃದಯ ರೋಗದಿಂದ ಬಳಲುತ್ತಿದ್ದ ಫಿಲಿಪೈನ್ಸ್ ದೇಶದ 2 ವರ್ಷದ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನ ಜಯದೇವ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.
ಅಪರೂಪದ ಹೃದಯ ರೋಗದಿಂದ ಬಳಲುತ್ತಿದ್ದ 2 ವರ್ಷದ ಅವಿಯನ್ ಅಲಿನ್ ಜೇಡ್ಗೆ ಎಂಬ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ತೀವ್ರ ಉಸಿರಾಟದ ಸಮಸ್ಯೆ, ಸೈನೋಸಿಸ್ ಹಾಗೂ ತೀವ್ರ ದಣಿದಿದ್ದ ಮಗುವಿಗೆ ಸ್ಯಾಚುರೇಶನ್ ಇಳಿಕೆಯಾಗಿತ್ತು. ಹಲವು ಸವಾಲುಗಳ ಮಧ್ಯೆಯೂ ಮಕ್ಕಳ ಹೃದಯ ತಜ್ಞ ಡಾ.ಜಯರಂಗನಾಥ್, ಡಾ.ಸುನೀಲ್ ಪಿ.ಕೆ, ಡಾ.ರಶ್ಮಿ ಕೋಟೆಚಾ, ಡಾ.ಹರೀಶ್ ಮಹಾಬಲ ಮತ್ತು ತಂಡ ಮಗುವಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದೆ. ನವೆಂಬರ್ 10ರಂದು ಈ ಶಸ್ತ್ರಚಿಕಿತ್ಸೆ ನಡೆದಿದ್ದು, ಗುಣಮುಖಗೊಂಡ ಅವಿಯನ್ ಜೇಡ್ ಇಂದು ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ.
ಟೆಟ್ರಾಲಜಿ ಆಫ್ ಫಾಲಟ್ ಎಂಬುದು ಹುಟ್ಟಿನಿಂದಲೇ ಕಂಡುಬರುವ ಅಪರೂಪದ ಹೃದಯ ಸ್ಥಿತಿಯಾಗಿದೆ. ಅಂದರೆ ಇದು ಜನ್ಮಜಾತ ಹೃದಯ ದೋಷ. ಈ ಸ್ಥಿತಿಯು ಹೃದಯದ ಮೂಲಕ ಮತ್ತು ದೇಹದ ಉಳಿದ ಭಾಗಗಳಿಗೆ ರಕ್ತದ ಹರಿವಿನಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ. ಟೆಟ್ರಾಲಜಿ ಆಫ್ ಫಾಲಟ್ ಹೊಂದಿರುವ ಶಿಶುಗಳು ಕಡಿಮೆ ಆಮ್ಲಜನಕದ ಮಟ್ಟದಿಂದಾಗಿ ನೀಲಿ ಅಥವಾ ಬೂದು ಬಣ್ಣದ ಚರ್ಮವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಅಥವಾ ಮಗು ಜನಿಸಿದ ಕೂಡಲೇ ಈ ರೋಗನಿರ್ಣಯ ಮಾಡಲಾಗುತ್ತದೆ. ಹೃದಯದ ಲಯ ಬದಲಾದರೆ ಮತ್ತು ಲಕ್ಷಣಗಳು ಸೌಮ್ಯವಾಗಿದ್ದರೆ, ಟೆಟ್ರಾಲಜಿ ಆಫ್ ಫಾಲಟ್ ಪ್ರೌಢಾವಸ್ಥೆಯವರೆಗೆ ಗಮನಕ್ಕೆ ಬರುವುದಿಲ್ಲ ಅಥವಾ ರೋಗನಿರ್ಣಯ ಮಾಡಲಾಗುವುದಿಲ್ಲ.








