ನವದೆಹಲಿ:
ಲೋಕಸಭಾ ಚುನಾವಣೆ 2024 ರ 5 ನೇ ಹಂತದ ಮತದಾನದ ವೇಳೆ ಮತದಾನ ಮಾಡದೇ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಕ್ಕಾಗಿ ಬಿಜೆಪಿ ತಮಗೆ ನೀಡಿದ್ದ ನೊಟೀಸ್ ಗೆ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದಿಂದ ತಮಗೆ ಕಾರಣ ಕೇಳಿ ನೊಟೀಸ್ ಜಾರಿಯಾಗಿರುವುದು ಅಚ್ಚರಿ ಮೂಡಿಸಿದೆ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ. ಮತದಾನ ಮಾಡದೇ ಇರುವುದು ಹಾಗೂ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ ಇರುವುದಕ್ಕೆ ನೊಟೀಸ್ ಜಾರಿ ಮಾಡಲಾಗಿತ್ತು.
ಪಕ್ಷದ ನೊಟೀಸ್ ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಜಯಂತ್ ಸಿನ್ಹಾ, ಚುನಾವಣೆ ಸಂದರ್ಭದಲ್ಲಿ ತಾವು ವೈಯಕ್ತಿಕ ಕಾರಣಗಳಿಂದಾಗಿ ವಿದೇಶಕ್ಕೆ ತೆರಳಿದ್ದಾಗಿ ಹೇಳಿದ್ದಾರೆ ಅಷ್ಟೇ ಅಲ್ಲದೇ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನವನ್ನು ಮಾಡಿರುವುದಾಗಿಯೂ ಸಿನ್ಹಾ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ನೊಟೀಸ್ ಪಡೆದಿದ್ದಕ್ಕೆ ಹಾಗೂ ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ನನಗೆ ಅಚ್ಚರಿ ಮೂಡಿಸಿದೆ ಎಂದು ಸಿನ್ಹಾ ಹೇಳಿದ್ದಾರೆ. ಜಾರ್ಖಂಡ್ ನ ಹಜಾರಿಬಾಗ್ ನ ಸಂಸದರಾಗಿರುವ ಜಯಂತ್ ಸಿನ್ಹಾ ಚುನಾವಣೆಯಿಂದ ಹಿಂದೆ ಸರಿದಿದ್ದರು ಅವರ ಬದಲಿಗೆ ಮನೀಷ್ ಜೈಸ್ವಾಲ್ ಗೆ ಟಿಕೆಟ್ ನೀಡಲಾಗಿತ್ತು.
ಪಕ್ಷದ ರಾಜ್ಯಾಧ್ಯಕ್ಷ ಸಾಹು ಅವರ ನೊಟೀಸ್ ಗೆ ಸಿನ್ಹಾ 2 ಪುಟಗಳ ಸುದೀರ್ಘ ಉತ್ತರ ನೀಡಿದ್ದಾರೆ. ಪಕ್ಷದ ಸಂಘಟನೆ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ ಏಕೆ ಎಂಬ ಪ್ರಶ್ನೆಗೂ ಸಿನ್ಹಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ನನ್ನನ್ನು ಪಕ್ಷದ ಯಾವುದೇ ಸಭೆ, ರ‍್ಯಾಲಿ, ಸಂಘಟನಾ ಸಭೆಗಳಿಗೆ ಆಹ್ವಾನಿಸಿಲ್ಲ ಎಂಬುದನ್ನು ಪಕ್ಷಕ್ಕೆ ನೆನಪಿಸಿದ್ದಾರೆ.
ಪಕ್ಷ ಮನೀಶ್ ಜೈಸ್ವಾಲ್ ಅವರನ್ನು 2024 ರ ಲೋಕಸಭಾ ಚುನಾವಣೆಗೆ ಹಜಾರಿಬಾಗ್ ಕ್ಷೇತ್ರದಿಂದ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಮಾ.8 ರಂದೇ ನಾನು ಜೈಸ್ವಾಲ್ ಅವರಿಗೆ ಅಭಿನಂದನೆ ಸಲ್ಲಿಸಿ ಅವರ ಉಮೇದುವಾರಿಕೆಯನ್ನು ಬೆಂಬಲಿಸಿದ್ದು ಸ್ಪಷ್ಟವಾಗಿತ್ತು. ಪಕ್ಷದ ಅಭ್ಯರ್ಥಿಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸಿದ್ದು ಸಮಾಜಿಕ ಜಾಲತಾಣಗಳಲ್ಲಿಯೂ ಸ್ಪಷ್ಟವಾಗಿ ದಾಖಲಾಗಿದೆ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ.
“ನಾನು ಯಾವುದೇ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಪಕ್ಷವು ಬಯಸಿದ್ದರೆ, ನೀವು ಖಂಡಿತವಾಗಿಯೂ ನನ್ನನ್ನು ಸಂಪರ್ಕಿಸಬಹುದಿತ್ತು. ಆದರೆ, ಜಾರ್ಖಂಡ್‌ನ ಯಾವೊಬ್ಬ ಪಕ್ಷದ ಹಿರಿಯ ನಾಯಕ ಅಥವಾ ಸಂಸದ/ಶಾಸಕರು ನನ್ನನ್ನು ಸಂಪರ್ಕಿಸಲಿಲ್ಲ. ಯಾವುದೇ ಪಕ್ಷದ ಕಾರ್ಯಕ್ರಮಗಳು, ರ್ಯಾಲಿಗಳಿಗೆ ಅಥವಾ ಸಾಂಸ್ಥಿಕ ಸಭೆಗಳಿಗೆ ನನ್ನನ್ನು ಆಹ್ವಾನಿಸಲಾಗಿಲ್ಲ ಎಂದು ಜಯಂತ್ ಸಿನ್ಹಾ ಹೇಳಿದ್ದಾರೆ.